ಸಿದ್ದಾಪುರ: ದೇಶ ಮತ್ತು ಭಾರತೀಯ ಸಂಸ್ಕೃತಿಯ ಹಿತದೃಷ್ಟಿಯಿಂದ ಸಂವಿಧಾನದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಭಾರತೀಯ ತಳಿಯ ಗೋವುಗಳಿಗೆ ರಾಷ್ಟ್ರೀಯ ಗೌರವ ನೀಡುವಂತೆ ಕೋರಿಕೊಳ್ಳುವುದು ಈ ಅಭಿಯಾನದ ಉದ್ದೇಶವಾಗಿದೆ. ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧ ಮಾಡಬೇಕು. ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನಮಾನ ನೀಡುವಂತಾಗಬೇಕು ಎಂದು ಬೆಂಗಳೂರಿನ ಆರೂಢಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ರಾಜಸ್ಥಾನ ಪಥಮೇಡಾದ ಪ್ರಾಣಪತಿ ರವೀಂದ್ರಾನಂದ ಸರಸ್ವತಿ ಮಹಾರಾಜ ಮಾತನಾಡಿ, ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯಿಂದ ನೀರು, ಭೂಮಿ, ವಾತಾವರಣ ಕಲುಷಿತವಾಗಿದೆ. ಹವಾಮಾನ ಹಾಗೂ ಮಳೆಯಲ್ಲಿ ವೈಪರೀತ್ಯವಾಗುತ್ತಿದೆ. ಹಿಂದೆ ಋಷಿಮುನಿಗಳು ಹಾಕಿಕೊಟ್ಟ ಜೀವನ ಪದ್ಧತಿಯನ್ನು ಅನುಸರಿಸುವಂತಾಗಬೇಕು. ಗೋಹತ್ಯಾ ನಿಷೇಧದಿಂದ ದೇಶೀಯ ತಳಿಗಳ ಸಂವರ್ಧನೆ ಜತೆಗೆ ಪರಿಶುದ್ಧ ಬೆಳೆ ಪಡೆಯಲು ಸಾಧ್ಯ. ಈ ಹಿನ್ನೆಲೆ ಗೋಮಾತೆಯ ಸಂರಕ್ಷಣೆಗಾಗಿ ಪ್ರತಿಯೊಬ್ಬ ಭಾರತೀಯನೂ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್.ಎಸ್. ಹೆಗಡೆ ಹರಗಿ, ಕೆ.ಪಿ. ಎಡಪ್ಪಾಡಿ, ರವಿ ಹೆಗಡೆ ಹೂವಿನಮನೆ, ಪಿ.ಬಿ. ಹೊಸೂರ ಸೇರಿದಂತೆ ಪ್ಯಾಸೆಂಜರ್ ಆಟೋ ಚಾಲಕ ಮಾಲೀಕ ಸಂಘದವರು, ಲಯನ್ಸ್ ಪದಾಧಿಕಾರಿಗಳು, ನಿವೃತ್ತ ನೌಕರರ ಸಂಘದವರು ಸಾರ್ವಜನಿಕರು ಪಾಲ್ಗೊಂಡಿದ್ದರು.