ಗದಗ: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕರುನಾಡ ವೀರವನಿತೆ ಕಿತ್ತೂರ ಚೆನ್ನಮ್ಮ ಮತ್ತು ಕಿತ್ತೂರ ಸಂಸ್ಥಾನದ ರೋಚಕ ಇತಿಹಾಸದ ಪುಟಗಳು ಇನ್ನೂ ಬೆಳಕಿಗೆ ಬರಬೇಕಾಗಿದ್ದು, ಈ ಬಗ್ಗೆ ವ್ಯಾಪಕ ಸಂಶೋಧನೆ ನಡೆಯಬೇಕಾಗಿದೆ ಎಂದು ಕಿತ್ತೂರ ಸಂಸ್ಥಾನದ ರಾಜಗುರು ಕಲ್ಮಠ ವಂಶಸ್ಥ ನಿವೃತ್ತ ಎಲ್ ಐಸಿ ಅಧಿಕಾರಿ, ಸಾಹಿತಿ ಗು.ರು.ಕಲ್ಮಠ ಹೇಳಿದರು.ಅವರು ಅಖಿಲ ಕರ್ನಾಟಕ ಕಬ್ಬಿಗರ ಕೂಟವು ಸ್ಥಳೀಯ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ 200ನೇ ವಿಜಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ, ಮಾತನಾಡಿದರು.
ಪ್ರಾಕೃತಿಕ ಸಂಪತ್ತಿನ ನಾಡಾಗಿದ್ದ ಕಿತ್ತೂರಿನ ಮೇಲೆ ಕಣ್ಣಿಟ್ಟಿದ್ದ ಬ್ರಿಟಿಷ್ ಅಧಿಕಾರಿಗಳು ಈ ಸಂಸ್ಥಾನದ ಕೆಲವು ಕುತಂತ್ರಿಗಳ ಪಿತೂರಿಯಿಂದ ದತ್ತಕ ಪ್ರಕರಣವನ್ನೇ ನೆಪ ಮಾಡಿಕೊಂಡು ಸಂಸ್ಥಾನ ವಶಕ್ಕೆ ಪಡೆಯಲು ನಡೆಸಿದ ಕುಯುಕ್ತಿಯಲ್ಲಿ ಚೆನ್ನಮ್ಮಳ ಶೌರ್ಯಕ್ಕೆ ಮಣಿದು ಥ್ಯಾಕರೆ ಪ್ರಾಣ ಕಳೆದುಕೊಂಡಿದ್ದು ದೇಶದ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟದ ವಿಜಯದುಂದುಬಿ ಮೊಳಗಲು ಕಾರಣವಾಯಿತು. ಆದರೆ ಬ್ರಿಟಿಷ್ ಕಮೀಷನರ್ ಚಾಪ್ಲಿನ್ ಮೋಸದಿಂದ ಯುದ್ಧ ಮಾಡಿ ಕಿತ್ತೂರನ್ನು ವಶಪಡಿಸಿಕೊಂಡು ಬ್ರಿಟಿಷ್ ಸಾಮ್ರಾಜ್ಯದ ಗೆಲುವಲ್ಲ ಕುತಂತ್ರದ ಆಟವೆಂದು ತಿಳಿಸಿದರು.ಕಬ್ಬಿಗರ ಕೂಟದ ಅಧ್ಯಕ್ಷ ನ್ಯಾಯವಾದಿ ಮನೋಹರ ಮೇರವಾಡೆ ಅಧ್ಯಕ್ಷತೆ ವಹಿಸಿದ್ದರು. ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ, ಸಾಹಿತಿ ಬಸವರಾಜ ಗಣಪ್ಪನವರ, ನಿವೃತ್ತ ಶಿಕ್ಷಕ ಎಸ್.ಎಸ್. ಮಲ್ಲಾಪೂರ ಇದ್ದರು. ಅನಸೂಯಾ ಮಿಟ್ಟಿ ಸ್ವಾಗತಿಸಿದರು. ನಜೀರ ಸಂಶಿ ವಂದಿಸಿದರು. ನಂತರ ಜರುಗಿದ ಕವಿಗೋಷ್ಠಿಯಲ್ಲಿ ಬಿ.ಎಸ್. ಹಿಂಡಿ, ಡಿ.ವಿ. ಬಡಿಗೇರ, ಬಸವರಾಜ ಗಣಪ್ಪನವರ, ಐ.ಟಿ. ಗದುಗಿನ, ವಿ.ಎಂ. ಪವಾಡಿಗೌಡ್ರ, ಅನಸೂಯಾ ಮಿಟ್ಟಿ, ಪಿ.ರೇಣುಕಾ, ಪಿ.ಜಿ. ಶೈಲಜಾ, ಪಿ.ಟಿ. ನಾರಾಯಣಪೂರ, ಮಲ್ಲಿಕಾರ್ಜುನ ಪೂಜಾರ ಮುಂತಾದವರು ಕವನ ವಾಚಿಸಿದರು.