ಹಾನಗಲ್ಲ: ಮಹಾನಗರಗಳಲ್ಲಿ ಸಿಗುವ ಶೈಕ್ಷಣಿಕ ಸೌಲಭ್ಯಗಳು ಗ್ರಾಮೀಣ ಮಕ್ಕಳಿಗೆ ದೊರೆಯುವ ಮೂಲಕ ಶೈಕ್ಷಣಿಕ ಕ್ರಾಂತಿ ಆಗಬೇಕಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಶನಿವಾರ ಹಾನಗಲ್ಲಿನ ಗುರುಭವನದಲ್ಲಿ ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್ ಹಾಗೂ ಧಾರವಾಡದ ಹ್ಯೂಮಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರ ಸಂಯುಕ್ತವಾಗಿ ಆಯೋಜಿಸಿದ ವೃತ್ತಿ ಮಾರ್ಗದರ್ಶನ, ಸಿಇಟಿ ಕೋಚಿಂಗ್, ಶಿಕ್ಷಕರಿಗೆ ತರಬೇತಿ, ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಇದು ಸ್ಪರ್ಧಾತ್ಮಕ ಯುಗ.
ಈಗ ಎಲ್ಲದಕ್ಕೂ ಪರೀಕ್ಷೆಯೇ ಮಾನದಂಡ. ಭವಿಷ್ಯದ ಆಯ್ಕೆ ಅವರವರ ಜ್ಞಾನಕ್ಕೆ ಬಿಟ್ಟದ್ದು. ಆದರೆ ಸಕಾಲಿಕವಾಗಿ ಮಕ್ಕಳಿಗೆ ಮುಂದಿನ ಸವಾಲುಗಳ ಅರಿವು ಮೂಡಿಸಿ,ಸರಿಯಾದ ಶಿಕ್ಷಣ ನೀಡದಿದ್ದರೆ ಪ್ರತಿಭಾವಂತ ಮಕ್ಕಳು ಒಳ್ಳೆಯ ಅವಕಾಶದಿಂದ ವಂಚಿತರಾಗುತ್ತಾರೆ.ಒಳ್ಳೆಯ ಅವಕಾಶ ನೀಡಿದಾಗ ಅದರ ಸದುಪಯೋಗಕ್ಕೆ ಎಲ್ಲರೂ ಒಗ್ಗೂಡಬೇಕು.ಹಾನಗಲ್ಲ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸಹಭಾಗಿತ್ವದಲ್ಲಿ ಮುಂದಾದರೆ ಒಳ್ಳೆಯ ಶೈಕ್ಷಣಿಕ ಹಿತ ಸಾಧಿಸಲು ಸಾಧ್ಯ ಎಂದರು.
ಬೆಂಗಳೂರಿನ ಡ್ರೀಮ್ ಫೌಂಡೇಶನ್‌ನ ಸಂಸ್ಥಾಪಕಿ ಮೈತ್ರೇಯಿ ಕುಮಾರ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳಲ್ಲಿ ಎಲ್ಲ ರೀತಿಯ ಬೌದ್ಧಿ ಚಲುವಿಕೆ ಇರುತ್ತದೆ. ಅದನ್ನು ಪರಿಚಯಿಸಿ ಪ್ರದರ್ಶಿಸುವ, ಕಲಿಕೆಯನ್ನು ಹೊಳಪುಗೊಳಿಸಿ ಅಭಿವೃದ್ಧಿಪಡಿಸುವತ್ತ ಎಲ್ಲರೂ ಚಿತ್ತ ಹರಿಸಬೇಕಾಗಿದೆ. ಉದ್ಯೋಗ ಆಧಾರಿತ ಶಿಕ್ಷಣ ಎಲ್ಲರ ಅಪೇಕ್ಷೆ. ಈಗ ಖಾಸಗಿ ಕಂಪನಿಗಳಲ್ಲಿ ಕೈತುಂಬ ಸಂಬಳದ ಒಳ್ಳೆಯ ಉದ್ಯೋಗಗಳು ಸಿಗುತ್ತವೆ.ಅದಕ್ಕಾಗಿ ನಮ್ಮ ಪ್ರತಿಭೆ ಪರಿಶ್ರಮ ಪ್ರಾಮಾಣಿಕತೆ ಬಳಸುವುದು ಅತ್ಯಂತ ಮುಖ್ಯ. ಗ್ರಾಮೀಣ ಮಕ್ಕಳು ಅತ್ಯಂತ ಪ್ರತಿಭಾವಂತರು ಆದರೆ ಅವರಿಗೆ ಅವಕಾಶಗಳ ಕೊರತೆ ಇದೆ. ಅಂತಹ ಕೊರತೆ ನೀಗಿಸಲು ನಮ್ಮ ಕೈಲಾದ ಕೆಲಸ ಮಾಡುತ್ತಿದ್ದೇವೆ ಎಂದರು.
ಹ್ಯುಮ್ಯಾನಿಟಿ ಫೌಂಡೇಶನ್ ಸಂಸ್ಥಾಪಕಿ ಸ್ವಾತಿ ಮಾಳಗಿ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಹಿತಕ್ಕೆ ಶಾಸಕ ಶ್ರೀನಿವಾಸ ಮಾನೆ ಹತ್ತು ಹಲವು ಒಳ್ಳೆಯ ಅವಕಾಶ ನೀಡಿದ್ದಾರೆ. ಸ್ಪರ್ಧಾತ್ಮ ಪರೀಕ್ಷೆಗಳ ವಿಷಯದಲ್ಲಿ ಹೆಚ್ಚು ಸಹಕಾರ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯ ಹೊಂದಬೇಕೆಂಬ ಅವರ ಇಚ್ಛಾಶಕ್ತಿಗೆ ಬೆಂಬಲವಾಗಿ ನಮ್ಮ ಸಂಸ್ಥೆ ಕೆಲವ ಮಾಡುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮುದಾಯದ ಸಹಭಾಗಿತ್ವ ಸಹಕಾರದಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಕೆ ಇನ್ನೂ ಉನ್ನತೀಕರಿಸಬೇಕು. ಭೌತಿಕವಾಗಿ ಹಲವು ಕೊರತೆಗಳಿದ್ದರೂ ಒಳ್ಳೆಯ ಕಲಿಕೆ, ಶಿಕ್ಷಕರ ಪರಿಶ್ರಮದಿಂದ ಮಕ್ಕಳು ಉನ್ನತ ಸಾಧನೆ ಮಾಡುತ್ತಿದ್ದಾರೆ. ಒಳ್ಳೆಯ ಮೂಲಭೂತ ಸೌಲಭ್ಯ ದೊರೆತರೆ ಬಹುಪಾಲು ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಡ್ರೀಮ್ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್.ಸುಗಂತ, ಹ್ಯಮ್ಯಾನಿಟಿ ಫೌಂಡೇಶನ್ ಸಂಸ್ಥಾಪಕಿ ಸ್ವಾತಿ ಮಾಳಗಿ, ಉದ್ಯಮಿ ವಿಜಯ ಮಾನೆ, ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪುರ, ನಿರ್ದೇಶಕ ಸಂತೋಷ ಅಪ್ಪಾಜಿ, ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.