ಕನಕಪುರ: ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ ದಲಿತರ ಆಶ್ರಯ ನಿವೇಶನಕ್ಕೆ ಮಂಜೂರಾಗಿದ್ದ ಜಾಗವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅತಿಕ್ರಮ ಪ್ರವೇಶ ಮಾಡಿ ಸುತ್ತಲೂ ಬೇಲಿ ಹಾಕಿದ್ದಾರೆಂದು ಆರೋಪಿಸಿ ಬೇಲಿಯನ್ನು ಕಿತ್ತುಹಾಕಿ ಪ್ರತಿಭಟನೆ ನಡೆಸಲಾಯಿತು.
ಹೊಸದುರ್ಗ ಪ್ರಶಾಂತ್, ದಿವ್ಯ, ಶಾಂತಮ್ಮ, ರವಿ ಮತ್ತಿತರರು ಮಾತನಾಡಿ, ದಲಿತರಿಗೆ ಮಂಜೂರಾಗಿದ್ದ ಸರ್ಕಾರಿ ಗೋಮಾಳ ಜಮೀನಿಗೆ ರಾತ್ರೋರಾತ್ರಿ ತಂತಿ ಬೇಲಿ ಹಾಕಿದ್ದಾರೆ. ಈ ಸ್ಥಳ ತಮಗೆ ಸೇರಿಬೇಕಿದ್ದು, ತಂತಿ ಬೇಲಿಯನ್ನು ಕಿತ್ತು ಹಾಕಿ ನಮಗೆ ನಿಗದಿಪಡಿಸಿದ್ದ ಈ ಜಾಗವನ್ನು ಕೂಡಲೇ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ವಿಷಯ ತಿಳಿದ ಕೋಡಿಹಳ್ಳಿ ನಾಡಕಚೇರಿ ಉಪ ತಹಸೀಲ್ದಾರ್ ಪ್ರವೀಣ್, ಕಂದಾಯ ನಿರೀಕ್ಷಕ ಬಸವರಾಜು, ಗ್ರಾಮ ಲೆಕ್ಕಾಧಿಕಾರಿ ಪ್ರೀತಿ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.ಈ ವೇಳೆ ಮಾತನಾಡಿದ ಅಧಿಕಾರಿಗಳು, ಈ ಜಾಗ ಸರ್ಕಾರಿ ಗೋಮಾಳವಾಗಿದೆ. ಈ ಸ್ಥಳಕ್ಕೆ ಹೊರಗಿನವರು ಬಂದು ತಂತಿಬೇಲಿ ಹಾಕಿರುವುದು ಅಕ್ರಮವಾಗಿದೆ. ಅವರ ವಿಳಾಸವನ್ನು ಪತ್ತೆ ಹಚ್ಚಿ ಸರ್ಕಾರಿ ಜಾಗ ಅತಿಕ್ರಮ ಪ್ರವೇಶದಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ಪ್ರತಿಭಟನೆಯಲ್ಲಿ ಕುಟ್ಟಿಯಮ್ಮ, ಭುವನೇಶ್ವರಿ, ಪಾಪಮ್ಮ, ಶೇಖರ, ವೆಂಕಟೇಶ್, ಮಾದಪ್ಪ ಹಲವರು ಭಾಗವಹಿಸಿದ್ದರು. ಪೊಟೋ೬ಸಿಪಿಟಿ೧೦: