ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸಂಸತ್‌ನಲ್ಲಿ ಯುವಕರು ಒಳನುಗ್ಗಿರುವುದು ಖಂಡನೀಯ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರ ಒತ್ತಾಯಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಕಹಿ ನೆನಪು ಇನ್ನೂ ಇದೆ. ಕೆಲ ಯುವಕರು ಮೊನ್ನೆ ಒಳಹೋಗಿದ್ದಾರೆ. ಯಾರಿಗೆ ಜೀವ ಹಾನಿ ಮಾಡುತ್ತಿದ್ದರೋ ಗೊತ್ತಿಲ್ಲ. ಇದೊಂದು ಭದ್ರತಾ ವೈಫಲ್ಯವಾಗಿದೆ. ಇದಕ್ಕೆ ಮೂಲ ಕಾರಣ ಯಾರು, ಮೂಲ ಬೇರು ತಗೆದು ಹಾಕೋ ಕೆಲಸ ಆಗಬೇಕು. ಕೇಂದ್ರ ಸರ್ಕಾರ ಸಂಪೂರ್ಣ ತನಿಖೆ ಮಾಡಬೇಕು. ಇದು ಸರ್ಕಾರಕ್ಕೆ ಕೆಟ್ಟ ಹೆಸರು ಎಂದರು.
ಸಂಸತ್ ದೇಶದ ಹೃದಯ ಭಾಗವಾಗಿದೆ. ಯಾರು ಇಂತಹ ಕೆಲಸ ಮಾಡಿದ್ದಾರೆ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಘಟನೆ ಪದೇ ಪದೇ ಆಗುತ್ತಿವೆ. ಸರಿಯಾಗಿ ತಿಳಿದುಕೊಂಡು ಪಾಸ್ ಕೊಡಬೇಕು. ಈ ಕುರಿತು ಸಮಗ್ರ ತನಿಖೆಯಾಗಬೇಕು. ಯಾಕೆ ಅವರು ಈ ಕೃತ್ಯಕೆ ಕೈ ಹಾಕಿದರೂ ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದರು.ಬಿಜೆಪಿಗೆ ಹೋಗಲ್ಲ
ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಲ್ಲ. ನನಗೆ ಈಶ್ವರಪ್ಪ ಭೇಟಿ ಆಗುವ ಅವಶ್ಯಕತೆ ಇಲ್ಲ. ಇದುವರೆಗೂ ನನ್ನ ಅವರ ಭೇಟಿ ಆಗಿಲ್ಲ, ಮುಂದೆ ಭೇಟಿ ಆಗುವ ಅವಶ್ಯಕತೆಯೂ ಇಲ್ಲ. ಹೀಗೆ ಮಾತಾಡಿ ಪಕ್ಷ ಬಿಟ್ಟು ಹೋಗುವವರಲ್ಲಿ ಈಶ್ವರಪ್ಪ ಗೊಂದಲ ಮೂಡಿಸುತ್ತಿದ್ದಾರೆ. ಒಂದು ಸಣ್ಣ ಎಂಎಲ್ಎ ಟಿಕೆಟ್ ಅಂತಾರೆ. ಹೌದು ಒಂದು ಸಣ್ಣ ಟಿಕೆಟ್ ಕೊಡಸೋಕೆ ನಿಮಗೆ ಆಗಲಿಲ್ಲ. ನಿಮಗೂ ಟಿಕೆಟ್ ಸಿಗಲಿಲ್ಲ ಎಂದು ತಿರುಗೇಟು ನೀಡಿದರು.ನಾನು ಅಪಮಾನದಿಂದ ಹೊರಗೆ ಬಂದಿದ್ದೇನೆ. ಈಶ್ವರಪ್ಪನವರೆ ನಿಮಗೆ ಧಕ್ಕೆ ಆದರೆ ಗೊತ್ತಾಗುತ್ತದೆ. ಅಡ್ವಾಣಿ, ವಾಜಪೇಯಿ ಅವರ ಕಾಲದ ಬಿಜೆಪಿ ಇದೀಗ ಉಳಿದಿಲ್ಲ. ಸಿದ್ಧಾಂತ ಮಾತಾಡುವುದನ್ನು ಈಶ್ವರಪ್ಪ ಬಿಟ್ಟು ಬಿಡಲಿ ಎಂದು ಹೇಳಿದರು.
ಕರ್ನಾಟಕ ಬಿಜೆಪಿ ಉದ್ದಾರ ಆಗುವುದಕ್ಕೆ ಸಾಧ್ಯ ಇಲ್ಲ. ದಿನಕ್ಕೆ ಒಬ್ಬೊಬ್ಬರು ಮಾತನಾಡುತ್ತಿದ್ದಾರೆ. ಬಿಜೆಪಿ ರಿಪೇರಿ ಆಗಲ್ಲ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ ಇದೀಗ ಮಾತಾಡಬೇಕು. ಸೋಲಿಸೋಕೆ ಹಣ ಕೊಟ್ಟಿದ್ದಾರೆ, ಬ್ಲಾಕ್ ಮೇಲೆ ಮಾಡಿದ್ದರು ಅಂತಾರೆ. ಇದರ ಬಗ್ಗೆ ಯಾಕೆ ಯಡಿಯೂರಪ್ಪ, ಬೊಮ್ಮಾಯಿ ಮಾತಾಡ್ತಿಲ್ಲ ಎಂದು ಪ್ರಶ್ನಿಸಿದ ಅವರು, ಯಾರದೋ ವೈಯಕ್ತಿಕ ಹಿತಾಸಕ್ತಿಗೆ ನನಗೆ ಟಿಕೆಟ್ ತಪ್ಪಿಸಿದ್ದರು. ನಾನು ವಾಪಸ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.