ಸತತ ಪ್ರಯತ್ನ, ದೃಢ ನಿರ್ಧಾರ, ಕಠಿಣ ಪರಿಶ್ರಮ ಇರಲಿ: ಆನಂದ್ ಭಟ್

KannadaprabhaNewsNetwork |  
Published : Nov 17, 2025, 01:45 AM IST
ಕವಿವಿ ಅಂತರ್ ಮಹಾವಿದ್ಯಾಲಯಗಳ 72ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಜ್ಞಾನ ಬಲ, ಸತತ ಪ್ರಯತ್ನ, ದೃಢ ನಿರ್ಧಾರ, ಕಠಿಣ ಪರಿಶ್ರಮಗಳು ನಮ್ಮನ್ನು ಬೃಹತ್ ಗುರಿಯತ್ತ ಸಾಗಿಸಬಲ್ಲವು.

ಕವಿವಿ ಅಂತರ್ ಮಹಾವಿದ್ಯಾಲಯಗಳ 72ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ಗೆಲ್ಲುತ್ತೇನೆ ಎಂಬ ನಿರ್ಧಾರ ನಮ್ಮಲ್ಲೇ ಪ್ರಬಲವಾಗಿದ್ದರೆ, ಸೋಲು ನಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ಜ್ಞಾನ ಬಲ, ಸತತ ಪ್ರಯತ್ನ, ದೃಢ ನಿರ್ಧಾರ, ಕಠಿಣ ಪರಿಶ್ರಮಗಳು ನಮ್ಮನ್ನು ಬೃಹತ್ ಗುರಿಯತ್ತ ಸಾಗಿಸಬಲ್ಲವು ಎಂದು ಉದ್ಯಮಿ ಆನಂದ್ ಭಟ್ ಹೇಳಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕವಿವಿ ಅಂತರ್ ಮಹಾವಿದ್ಯಾಲಯಗಳ 72ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ನಮ್ಮ ಕಾರ್ಯದಲ್ಲಿ ನಾವು ಸಫಲರಾಗಬೇಕೆಂದರೆ ಅದರ ಕಡೆಗೆ ನೇರ ಗಮನ ಗುರಿ ಮತ್ತು ಯೋಗ್ಯ ತರಬೇತಿ ಇರಬೇಕು. ನಮ್ಮ ಜೀವನದ ತೊಂದರೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ಕಷ್ಟಗಳನ್ನು ಹಿಮ್ಮೆಟ್ಟಿ ಜೀವನದಲ್ಲಿ ಪ್ರಕಾಶಮಾನವಾಗಿ ಬೆಳಗಿರಿ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ₹25 ರಿಂದ 30 ಲಕ್ಷ ಬಜೆಟ್ಟಿನ ಇಂತಹ ಕ್ರೀಡಾಕೂಟವನ್ನು ಆಯೋಜಿಸಿದ್ದ ಸಂಘಟಕರ ಸಾಧನೆ ಶ್ಲಾಘನೀಯ. ಇಲ್ಲಿರುವ ಬೃಹತ್ ಕ್ರೀಡಾಂಗಣವು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ. ಈ ಕ್ರೀಡಾಂಗಣದ ಕುರಿತು ಇರುವ ವ್ಯಾಜ್ಯವನ್ನು ಬಗೆಹರಿಸಿ ಕ್ರೀಡಾಂಗಣವನ್ನು ಎಂ.ಪಿ.ಇ ಸೊಸೈಟಿಗೆ ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗೆ ಸಲಹೆ ನೀಡಿದರು.

ಹೊನ್ನಾವರ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಯೋಗೀಶ್ ಸಿ.ಕೆ, ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ ಮಾತನಾಡಿದರು. ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಕರ್ನಾಟಕ ವಿವಿ ಧಾರವಾಡ ಕ್ರೀಡಾ ವಿಭಾಗದ ಅರವಿಂದ ಕರಿ ಬಸನಗೌಡ್ರ, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ತರಬೇತುದಾರ ವಸಂತ ಜೋಗಿ, ದೈಹಿಕ ಶಿಕ್ಷಣ ವಿಭಾಗದ ಭಾರತಿ ಗಾಣಿಗೇರ, ಹೊನ್ನಾವರ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ರಾಜೇಶ್ ಭಂಡಾರಿ, ಉದ್ಯಮಿ ಖಲೀಲ್ ಶೇಕ್, ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಆರ್.ಕೆ. ಮೇಸ್ತ, ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಕಾರ್ತಿಕ ಗೌಡ ಮುಂತಾದವರಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದ ಗದಗ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ ಜಿಲ್ಲೆಯ 800ಕ್ಕೂ ಹೆಚ್ಚು ಕ್ರೀಡಾಪಟುಗಳಿಂದ ಪಥ ಸಂಚಲನ ನಡೆಯಿತು. ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಡಾ. ಎಂ. ಜಿ. ಹೆಗಡೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ವಿನಾಯಕ ಭಟ್ಟ, ಬಿಂದು ಅವಧಾನಿ ನಿರೂಪಿಸಿದರು. ಐ ಕ್ಯೂ ಎಸಿ ಸಂಯೋಜಕ ಡಾ. ಸುರೇಶ್ ಎಸ್. ವಂದಿಸಿದರು. ಈ ಸಮಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಲವಾರು ನೂತನ ದಾಖಲೆಗಳು ದಾಖಲಾದವು.

PREV

Recommended Stories

ಕೆಎಲ್ಇ ಶಿಕ್ಷಣ ಜತೆಗೆ ಸಂಸ್ಕಾರ ನೀಡಿದ ಸಂಸ್ಥೆ
ಸಾಲುಮರದ ತಿಮ್ಮಕ್ಕನವರ ಪ್ರಕೃತಿ ಪ್ರೇಮ ಎಲ್ಲರಿಗೂ ಆದರ್ಶ: ಶಾಸಕಿ ಅನ್ನಪೂರ್ಣ