ಶಿವಮೊಗ್ಗ: ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳು ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು, ಸಿಎಸ್‌ಆರ್ ಮತ್ತು ದಾನಿಗಳ ಸಹಕಾರ ಸದಾ ಇರಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ 3 ವಿಭಾಗಗಳಿವೆ. ಒಂದು ಸಿಎಸ್‌ಆರ್ ನಿಧಿ, ದಾನಿಗಳು ಮತ್ತು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ದಾನಿಗಳಾಗಿದ್ದು, ಇದರಿಂದ ರಾಜ್ಯದಲ್ಲಿ ಅನೇಕ ಶಾಲೆಗಳು ಅಭಿವೃದ್ಧಿ ಕಾಣುತ್ತಿವೆ ಎಂದರು.
ಮುಖ್ಯಮಂತ್ರಿಗಳು ತಮ್ಮ ಸಂಬಳದಲ್ಲಿ 10 ಲಕ್ಷ ರು. ಅವರು ಓದಿದ ಶಾಲೆಗೆ ನೀಡಿದ್ದಾರೆ. ನನ್ನ ಸಂಬಳದಲ್ಲಿ 10 ಲಕ್ಷ ರು. ನನ್ನ ಊರಿನ ಶಾಲೆಯ ಪೀಠೋಪಕರಣಕ್ಕೆ ನೀಡಿದ್ದೇನೆ. ಸಿಎಸ್‌ಆರ್ ಅಡಿಯಲ್ಲಿ ಸಾಕಷ್ಟು ಶಾಲೆಗಳ ಅಭಿವೃದ್ಧಿ ಆಗುತ್ತಿದ್ದು ಅದರಲ್ಲಿ ಗರಿಷ್ಟ ಹಣ 1591 ಕೋಟಿ ರು. ಅಜೀಂ ಪ್ರೇಂಜೀ ಫೌಂಡೇಶನ್‌ನಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೊಟ್ಟೆಗಾಗಿ ನೀಡಿದ್ದಾರೆ ಎಂದು ತಿಳಿಸಿದರು.ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ಉಚಿತವಾಗಿ 57 ಲಕ್ಷ ಮಕ್ಕಳಿಗೆ ಹಾಲು, ರಾಗಿ ಮಾಲ್ಟ್, 2 ಜೊತೆ ಸಮವಸ್ತ್ರ, ಶೂ ಸಾಕ್ಸ್ ಉಚಿತ ಊಟ, ಮೊಟ್ಟೆ ಹಾಗೂ ಕಲಿಕೆಯಲ್ಲಿ ಮುಂದೆ ಬರಲು ಶಾಲೆಗಳಿಗೆ ಉಚಿತ ವಿದ್ಯುತ್, ನೀರು, ಗ್ರಂಥಾಲಯಕ್ಕೆ ಉಚಿತ ವಿದ್ಯುತ್, ಸಂಜೆ ವಿಶೇಷ ಕ್ಲಾಸು, ಪರೀಕ್ಷಾ ಪಾವಿತ್ರ‍್ಯತೆ ಕಾಪಾಡಲು ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಡಿಬಿ ಬ್ಯಾಂಕ್ ಕೆಪಿಎಸ್ ಶಾಲೆ ಮಾಡಲು 2 ಸಾವಿರ ಕೋಟಿ ರು. ನೀಡಿದೆ. ಗ್ರಾಮೀಣ ಭಾಗದ ಎಷ್ಟೋ ಜನರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೇ ರೀತಿ ಅನೇಕರು ಸಹಾಯ ಮಾಡಿದ್ದಾರೆ. ಹಳೇ ವಿದ್ಯಾರ್ಥಿಗಳು, ರೌಂಡ್ ಟೇಬಲ್‌ನಂತಹ ಸಂಸ್ಥೆಗಳು, ಇತರೆ ಉದ್ಯಮಗಳು ಸಹರಿಸುತ್ತಿವೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲಾಗುತ್ತಿದ್ದು, ಇದೇ ರೀತಿಯಲ್ಲಿ ನಿಮ್ಮ ಸಹಕಾರ ಇರಲಿ ಎಂದರು.
ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಮತ್ತು ಸಿಎಸ್‌ಆರ್ ಅನುದಾನ ಬಳಕೆ ಉತ್ತಮ ಕ್ರಮವಾಗಿದೆ. ರೌಂಡ್ ಟೇಬಲ್ ಇತರೆ ಸಂಸ್ಥೆಗಳು ಉತ್ತಮ ಕಾರ್ಯಕ್ರಮ ಮಾಡುತ್ತಿವೆ. ಶಿವಮೊಗ್ಗದ ಮುಖ್ಯವಾದ 3 ಕೈಗಾರಿಕಾ ಪ್ರದೇಶಗಳು ಸಿಎಸ್‌ಆರ್ ಅಡಿ ಉತ್ತಮ ಕೆಲಸ ಮಾಡುತ್ತಿದ್ದು ಮುಂದೆಯೂ ಸಹಕರಿಸಲಿವೆ ಎಂದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಅಲೆಮಾರಿಗಳ ನಿಗಮದ ಅಧ್ಯಕ್ಷೆ ಪಲ್ಲವಿ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಹೇಮಂತ್.ಎನ್, ಡಿಡಿಪಿಐ , ಬ್ಯಾಂಕ್ ಅಧಿಕಾರಿಗಳು ಮತ್ತಿತರರಿದ್ದರು.