ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ವಿದ್ಯಾನಗರದಲ್ಲಿರುವ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ದಸರಾ ಹಬ್ಬದ ನಿಮಿತ್ತ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಅಪಾರ ಪ್ರತಿಭಾವಂತ ಕಲಾವಿದರಿದ್ದಾರೆ. ಅವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಉತ್ತಮ ಕಾರ್ಯ ಮಾಡುತ್ತಿದೆ. ಕಲಾವಿದರಿಗೆ ಸರ್ಕಾರದಿಂದ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಲಾವಿದರು ಹಾಗೂ ರಂಗಕಲಾವಿದರು ನಿಜವಾದ ಹೀರೋಗಳಾಗಿದ್ದು, ಯುವಶಕ್ತಿಯೊಂದಿಗೆ ನಾಡಿನ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಡಾ. ಕೆ.ಜಿ. ಬ್ಯಾಕೋಡಿ ಮಾತನಾಡಿ, ಗ್ಯಾಲರಿಯಲ್ಲಿ ಪ್ರದರ್ಶಿಸಿರುವ ಕಲಾಕೃತಿಗಳು ಅಮೋಘವಾಗಿದ್ದು, ನೋಡುಗರಲ್ಲಿ ರೋಮಾಂಚನ ಮೂಡಿಸುತ್ತವೆ. ವಿಶೇಷವಾಗಿ ವಸಂತ ಬಳ್ಳಾರಿ ಅವರ ದೇವಿಯ ಶಿಲ್ಪ ಸಾಕ್ಷಾತ್ ದೇವಿಯ ದರ್ಶನದ ಅನುಭವ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕಲೆ ಸಮಾಜದಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಸೆಯುತ್ತದೆ. ಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಡಾ. ವಿ.ಬಿ. ನಿಟಾಲಿ, ಎಲ್.ಸಿ. ಬೆಲ್ಲದ, ರಾಜು ಸೋನಾವನೆ, ವಸಂತ ಬಳ್ಳಾರಿ, ಮಂಜುನಾಥ ಕರಿಗಾರ, ಸುರೇಶ ಅರ್ಕಸಾಲಿ, ಸುಶೀಲ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು. ದೀಪಾ ವೇರ್ಣೇಕರ ಸ್ವಾಗತಿಸಿದರು. ಸವಿತಾ ಬೆಣಗಿ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಮಹಿಳಾ ಕಲಾವಿದೆಯರಿಂದ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಿತು.