ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಕೊರತೆ ಆಗದಂತೆ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲೆಯ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಕೊರತೆ ಆಗಬಹುದಾದ ಗ್ರಾಮಗಳಿಗೆ ನೀರನ್ನು ಪೂರೈಸಲು ತಹಸೀಲ್ದಾರರು, ಇ.ಒ.ಗಳು ಈಗಿನಿಂದಲೇ ಖಾಸಗಿ ಬೋರ್‌ವೆಲ್‍ಗಳನ್ನು ಗುರುತಿಸಿಟ್ಟುಕೊಳ್ಳಬೇಕು. ತಾಲೂಕುಗಳಲ್ಲಿ ಇಒ ಮತ್ತು ತಹಸೀಲ್ದಾರರು, ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ನೀರಿನ ಸಮಸ್ಯೆ ಆಗಬಹುದಾದ ಗ್ರಾಮ, ಪ್ರದೇಶಗಳನ್ನು ಮತ್ತೊಮ್ಮೆ ಪರಿಶೀಲಸಿ, ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
37 ಸಾವಿರ ಮೇವಿನ ಕಿಟ್:ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೆರೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಜಾನುವಾರುಗಳ ಮೇವಿಗೆ ಸದ್ಯಕ್ಕೆ ಕೊರತೆ ಇಲ್ಲ. 23 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಇದೆ. ಆದರೆ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿ 13 ವಾರಗಳಿಗೆ ಆಗುವಷ್ಟು ಮಾತ್ರ ಇದ್ದು, ಒಟ್ಟಾರೆ ಹೆಚ್ಚುವರಿ ಅಗತ್ಯವಿರುವ 37 ಸಾವಿರ ಮೇವಿನ ಕಿಟ್ ತರಿಸಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಸಿ ಸತ್ಯನಾರಾಯಣ್, ಜಿಪಂ ಉಪ ಕಾರ್ಯದರ್ಶಿ ಸುಜಾತ, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ಎಲ್ಲ ತಾಲೂಕುಗಳ ತಹಸೀಲ್ದಾರರು, ಇತರೆ ಅಧಿಕಾರಿಗಳು ಹಾಜರಿದ್ದರು.- - -
-23ಎಸ್‌ಎಂಜಿಕೆಪಿ03:
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲೆಯ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿದರು.