ಮನೆ-ಮಠಗಳಲ್ಲಿ ಹಿರಿಯರ ಗೌರವಿಸುವ ಕಾರ್ಯವಾಗಲಿ

KannadaprabhaNewsNetwork | Published : Mar 13, 2025 12:51 AM

ಸಾರಾಂಶ

ಸಾಣೇಹಳ್ಳಿಯಲ್ಲಿ ನಡೆದ ದವಸ ಸಮರ್ಪಣಾ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಅನುಪಮ ಸೇವೆ ಸಲ್ಲಿಸಿದ ಹಿರಿಯ ಚೇತನಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ದವಸ ಸಮರ್ಪಣೆ, ಅಭಿನಂದನಾ ಸಮಾರಂಭದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿಕೆಕನ್ನಡಪ್ರಭ ವಾರ್ತೆ ಹೊಸದುರ್ಗ

ಮಕ್ಕಳು, ಮೊಮ್ಮಕ್ಕಳು ವಯಸ್ಸಾದ ಹಿರಿಯರನ್ನು ಮಕ್ಕಳಂತೆ ಆರೈಕೆ ಮಾಡಬೇಕು. ನಮ್ಮ ಹಿರಿಯರು ಸಂಪತ್ತಿದ್ದಂತೆ. ಅವರೊಂದು ವಿಶ್ವಕೋಶ. ಅಂತಹ ವಿಶ್ವಕೋಶದಂತಿರುವ ಹಿರಿಯರನ್ನು ಅನಾಥಪ್ರಜ್ಞೆ ಕಾಡದಂತೆ ನೋಡಿಕೊಳ್ಳಬೇಕು. ಅವರನ್ನು ಗುರುತಿಸುವ ಕಾರ್ಯ ಮನೆ-ಮಠಗಳಲ್ಲಿ ಆಗಬೇಕು. ಮನೆಯಲ್ಲಿ ಹಿರಿಯರನ್ನು ಪ್ರತಿನಿತ್ಯ ಗೌರವಿಸುವ ಕಾರ್ಯ ಆದಾಗ ಅವರು ನೆಮ್ಮದಿಯಿಂದ ಬದುಕಲಿಕ್ಕೆ ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳೀಯ ಎಸ್ಎಸ್ ರಂಗಮಂದಿರದಲ್ಲಿ ನಡೆದ ಹಳೆಬೇರು ಹೊಸ ಚಿಗುರು ಕಾರ್ಯಕ್ರಮದ ಅಡಿಯಲ್ಲಿ ದವಸ ಸಮರ್ಪಣೆ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ನಮ್ಮ ಸುತ್ತಮುತ್ತಲು ಇರುವ ಪರಿಸರ, ತಿನ್ನುವ ಆಹಾರ, ನೀರು, ನಮ್ಮ ಹವ್ಯಾಸ ಇವು ನಮ್ಮ ಆರೋಗ್ಯ ಹಾಳು ಮಾಡುತ್ತಿದೆ. ಮನುಷ್ಯ ಹಣದ ಹಿಂದೆ ಓಡಿ ಆದರ್ಶಗಳನ್ನು ಗಾಳಿಗೆ ತೂರುತ್ತಿದ್ದಾನೆ ನಮ್ಮ ಆರೋಗ್ಯ ಕಾಪಾಡುವುದು ಹಣವಲ್ಲ. ಹಣದ ಹಿಂದೆ ಹೋಗದೇ ನಮ್ಮ ಮನೆಯಲ್ಲಿರುವ ಸದಸ್ಯರನ್ನು ಪರಸ್ಪರ ಪ್ರೀತಿಸುವ, ಗೌರವಿಸುವ ಗುಣ ಬೆಳೆಸಬೇಕು.

ಹಣಕ್ಕೆ ಹೆಚ್ಚು ಮಾನ್ಯತೆ ಕೊಡುತ್ತಾ ಹೋದರೆ ನಮ್ಮ ಜೀವನ ಹೆಣವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ ಇದರಿಂದ ಹೊರ ಬರಬೇಕಾದರೆ ಸರಳವಾದ ಜೀವನ ನಡೆಸಬೇಕು. ದೈಹಿಕವಾಗಿ, ಮಾನಸಿಕವಾಗಿ ಕೆಲಸ ಮಾಡಿ ಎಲ್ಲರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದಾಸೋಹಕ್ಕೆ ಹೊಸ ರೂಪ ಕೊಟ್ಟವರು ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು. ಹಳ್ಳಿ ಹಳ್ಳಿಗೆ ಹೋಗಿ ದವಸ ಸಂಗ್ರಹ ಮಾಡುತ್ತಿದ್ದರು. ಇದರಿಂದ ಗುರುಶಿಷ್ಯರ ಸಂಬಂಧ ಹೆಚ್ಚಿಸುತ್ತಿತ್ತು ನಮ್ಮ ಸಮಾಜದ ಭಕ್ತರಿಗೆ ಇವತ್ತಿಗೂ ಗುರುಗಳ ಬಗ್ಗೆ ಸದ್ಭಾವನೆ ಇದೆ. ಗುರು ಶಿಷ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ ಮಠ ಹಾಗೂ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಚಟ್ನಳ್ಳಿ ಮಹೇಶ್ ಮಾತನಾಡಿ, ನಮ್ಮ ಕೃಷಿಕರು ಯಾವುದೇ ಕೆಲಸ ಮಾಡಿದರೂ ಒಳ್ಳೆಯ ಗಳಿಗೆಯನ್ನು ಸೃಷ್ಠಿ ಮಾಡಿಕೊಳ್ಳುವರು. ಇವತ್ತಿನ ದಿನಮಾನದ ಗಳಿಗೆ ವಿಷದ ಗಳಿಗೆಯಾಗುತ್ತಿದೆ. ಪ್ರತಿ ಕ್ಷಣವನ್ನು ತಿಳಿವಳಿಕೆಯ ಕ್ಷಣವನ್ನಾಗಿ ಮಾಡಿಕೊಳ್ಳಬೇಕು. ಪಂಡಿತಾರಾಧ್ಯ ಗುರುಗಳು ಭಕ್ತರ ಇದ್ದಲ್ಲಿಗೆ ಹೋಗಿ ಜ್ಞಾನದ ಧಾರೆಯನ್ನು ಎರೆದು ನಡೆದಾಡುವ ವಿಶ್ವ ವಿದ್ಯಾಲಯವಾಗಿದ್ದಾರೆ. ಅವರೊಬ್ಬ ಸರ್ವ ಕ್ಷೇತ್ರದ ಕುಲಪತಿಗಳು. ಇಂದು ಯಾವುದೇ ಕಾರ್ಯ ತಕ್ಷಣ ಫಲ ಕೊಡದೇ ಇರಬಹುದು. ಆದರೆ ಮುಂದೊಂದು ದಿನ ಆ ಫಲ ಕೊಟ್ಟೇ ಕೊಡುತ್ತೆ ಎನ್ನುವ ತಿಳಿವಳಿಕೆ ಇರಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸಮಾಜಕ್ಕೆ ಅನುಪಮ ಸೇವೆ ಸಲ್ಲಿಸಿದ ಹಿರಿಯ ಚೇತನಗಳಾದ ಪರ್ವತನಹಳ್ಳಿಯ ಚಂದ್ರಶೇಖರಪ್ಪ, ಕುಂಕನಾಡಿನ ರಾಮಲಿಂಗಪ್ಪ, ಕೊರಟಿಕೆರೆಯ ಸಣ್ಣ ಸಿದ್ದಪ್ಪ, ಹೊಗರೆಹಳ್ಳಿಯ ಎಚ್.ಜಿ.ಶೇಖರಪ್ಪ, ತಾವರಕೆರೆಯ ಪುಟ್ಟಪ್ಪ, ಚನ್ನಾಪುರ ರುದ್ರಪ್ಪ, ಮುಂಡ್ರೆಯ ನಿಂಗಪ್ಪ, ಮಲ್ಲೇನಹಳ್ಳಿಯ ನಾಗೇಂದ್ರಪ್ಪ, ಅತ್ತಿಮಗ್ಗೆಯ ಈಶ್ವರಪ್ಪ, ಚಿಕ್ಕನಾಯಕನಹಳ್ಳಿಯ ಮರುಳಸಿದ್ಧಪ್ಪ, ಜಂತಿಕೊಳಲು ಚಂದ್ರಯ್ಯ, ಮಲ್ಲಿಕಾರ್ಜುನಪ್ಪ, ಬಸವರಾಜ, ಮರುಳಪ್ಪ, ಮರುಳಪ್ಪ, ನೇರಲಕೆರೆಯ ಮಲ್ಲಿಕಾರ್ಜುನಪ್ಪ ಆರ್, ತಡಗದ ಮಲ್ಲಪ್ಪ, ಅಬ್ಬಿನಹೊಳಲಿನ ಈಶ್ವರಪ್ಪ, ಮೇದಿಹಳ್ಳಿಯ ವೀರಭದ್ರಪ್ಪ, ವಿಠಲಾಪುರದ ಪಟೇಲ್ ಮರುಳಪ್ಪ, ಕುರುಬರಹಳ್ಳಿಯ ಈಶ್ವರಪ್ಪ, ದೊಡ್ಡನಿಂಗೇನಹಳ್ಳಿಯ ಲೀಲಾ, ಅಜ್ಜಂಪುರದ ಮರುಳಪ್ಪ, ಹುಣಸಘಟ್ಟದ ಈಶ್ವರಪ್ಪ, ಅಂದೇನಹಳ್ಳಿಯ ಸಿದ್ಧಯ್ಯ, ಬಂಡಿಕೊಪ್ಪಲದ ಮಹೇಶ್ವರಪ್ಪ, ಸೊಕ್ಕೆಯ ವೀರಭದ್ರಪ್ಪ, ಜಾನಕಲ್‌ನ ಡಿ.ಎಸ್.ಶಂಕರಮೂರ್ತಿ, ಸಾಣೇಹಳ್ಳಿಯ ಎಸ್.ಡಿ.ಶಿವಮೂರ್ತಯ್ಯನವರನ್ನು ಗೌರವಿಸಿ ಅಭಿನಂದಿಸಲಾಯಿತು.

ಎಸ್.ಆರ್.ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಆರ್.ಚಂದ್ರಪ್ಪ ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಮಲ್ಲಿಕಾರ್ಜುನ್ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಸಿದ್ದಪ್ಪ ಎಸ್ ಉಪಸ್ಥಿತರಿದ್ದರು.

Share this article