ಹೋಂಸ್ಟೇ ಹೆಸರು ನೋಂದಾಯಿಸಿ: ವೆಂಕಟ್ ರಾಜಾ

KannadaprabhaNewsNetwork |  
Published : Mar 13, 2025, 12:51 AM IST
ಚಿತ್ರ : 12ಎಂಡಿಕೆ1 : ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ನಿರ್ವಹಿಸುವ ಕುರಿತು ಸಭೆ ನಡೆಯಿತು.  | Kannada Prabha

ಸಾರಾಂಶ

ಹೋಂ ಸ್ಟೇ ನೋಂದಣಿ ಪ್ರಕ್ರಿಯೆಯು ಅತ್ಯಂತ ಸರಳೀಕರಣವಾಗಿದ್ದು ಕಡಿಮೆ ಅವಧಿಯಲ್ಲಿ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಪ್ರವಾಸಿ ಸ್ಥಳ, ಹೋಂಸ್ಟೇ ಹಾಗೂ ಹೋಟೆಲ್‌ಗಳು ಸೇರಿದಂತೆ ಎಲ್ಲೆಡೆ ಪ್ರವಾಸಿಗರ ಸುರಕ್ಷತೆ ಮತ್ತು ರಕ್ಷಣೆಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇದುವರೆಗೆ ನೋಂದಣಿ ಆಗದಿರುವ ಹೋಂಸ್ಟೇಗಳು ಕಡ್ಡಾಯವಾಗಿ ನೋಂದಣಿ ಆಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ನಿರ್ವಹಿಸುವ ಕುರಿತು ಜಿಲ್ಲೆಯ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಟ್ರಾವೆಲ್ಸ್ ಏಜೆನ್ಸಿ ಸಂಸ್ಥೆಯ ಪ್ರತಿನಿಧಿಗಳ ಜತೆ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಹೋಂ-ಸ್ಟೇ ನೋಂದಣಿ ಪ್ರಕ್ರಿಯೆಯು ಅತ್ಯಂತ ಸರಳೀಕರಣವಾಗಿದ್ದು, ಕಡಿಮೆ ಅವಧಿಯಲ್ಲಿ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ಆ ದಿಸೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲೆಯ ಎಲ್ಲಾ ಹೋಂ-ಸ್ಟೇಗಳು ಕಡ್ಡಾಯವಾಗಿ ಹೆಸರು ನೋಂದಾಯಿಸುವಂತೆ ಜಿಲ್ಲಾಧಿಕಾರಿ ಅವರು ಕೋರಿದರು.

ಪ್ರವಾಸಿ ಸ್ಥಳಗಳಲ್ಲಿ, ಹೋಂಸ್ಟೇ, ಹೋಟೆಲ್‌ಗಳು ಸೇರಿದಂತೆ ಎಲ್ಲೆಡೆ ಸಿಸಿಟಿವಿ ಅಳವಡಿಸುವುದು, ಹೋಂಗಾರ್ಡ್ಗಳ ನಿಯೋಜನೆ, ರಾತ್ರಿ ವೇಳೆಯಲ್ಲಿ ಬೆಳಕು ವ್ಯವಸ್ಥೆ ಮಾಡುವುದು ಹೀಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

‘ನೋಂದಣಿ ಆಗದಿರುವ ಹೋಂಸ್ಟೇಗಳು ಕಡ್ಡಾಯವಾಗಿ ನೋಂದಣಿ ಆಗಬೇಕು. ನೋಂದಣಿ ಮಾಡಿಕೊಂಡ ಎಲ್ಲಾ ಹೋಂಸ್ಟೇಗಳ ಮಾಹಿತಿ ಅಂತರ್ಜಾಲದಲ್ಲಿ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಈ ಕೆಲಸ ತುರ್ತಾಗಿ ಆಗಬೇಕಿದೆ ಎಂದರು.’

ತಾ.ಪಂ.ಇಒ ಹಾಗೂ ತಹಸೀಲ್ದಾರರ ನೇತೃತ್ವದಲ್ಲಿ ಸಭೆ ನಡೆಸಿ ವ್ಯಾಪಾರ-ವಹಿವಾಟು ಪರವಾನಗಿ ನೀಡುವಾಗ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ನಂತರ ಪರವಾನಗಿ ನೀಡಬೇಕು ಎಂದು ಸೂಚಿಸಿದರು.

ಸ್ಥಳೀಯ ಸಂಸ್ಥೆಗಳು, ಪರವಾನಗಿ ನೀಡುವ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಇದರಿಂದ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಸಾಧ್ಯ ಎಂದು ಹೇಳಿದರು.

ಎಲ್ಲಾ ಹೋಂಸ್ಟೇಗಳು ನೋಂದಣಿಯಾಗಬೇಕೆಂಬುದು ಜಿಲ್ಲಾಡಳಿತದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ 500 ರು. ಪಾವತಿಸಿ ಆನ್‌ಲೈನ್ ಮೂಲಕ ನೋಂದಣಿ ಮಾಡುವಂತಾಗಬೇಕು. ಗಡಿ ಪ್ರದೇಶಗಳಾದ ಚೇಲಾವರ, ಇರ್ಪು, ದುಬಾರೆ ಮತ್ತಿತರ ಗಡಿ ಪ್ರದೇಶದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಅನಧಿಕೃತ ಹೋಂ-ಸ್ಟೇಗಳಲ್ಲಿ ನಿಯಮ ಬಾಹಿರ ಚಟುವಟಿಕೆಗಳು ಅಥವಾ ಯಾವುದೇ ರೀತಿ ದುರ್ಘಟನೆಗಳು ಸಂಭವಿಸಿದಲ್ಲಿ ಕಾನೂನು ರೀತಿಯ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪೊಲೀಸ್/ ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ/ ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಸಂಭವಿಸುವ ದುರ್ಘಟನೆಗಳಿಗೆ ಆಯಾಯ ಹೋಂ-ಸ್ಟೇ ಮಾಲೀಕರೇ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಹೋಂ-ಸ್ಟೇ/ ರೆಸಾರ್ಟ್/ ವಸತಿ ಸಮುಚ್ಚಯಗಳಲ್ಲಿ ವಾಸ್ತವ್ಯ ಹೂಡುವಾಗ ಪ್ರವಾಸಿಗರ ಸುರಕ್ಷತೆ ಪೂರ್ಣ ಜವಾಬ್ದಾರಿ ಮಾಲೀಕರದ್ದಾಗಿದೆ. ಆ ನಿಟ್ಟಿನಲ್ಲಿ ಯಾವುದೇ ಅಹಿತರಕರ ಘಟನೆ ಅಥವಾ ದುರ್ಘಟನೆಗಳು ನಡೆಯದಂತೆ ಸೂಕ್ತ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದರು.

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಹೆಚ್ಚಿನ ವಿದ್ಯುತ್‌ಕರಣ/ ಲೈಟಿಂಗ್‌ಗಳ ಸೂಕ್ತ ವ್ಯವಸ್ಥೆ ಕೈಗೊಳ್ಳಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ತುರ್ತು ಸಂದರ್ಭದಲ್ಲಿ ಜಿಲ್ಲೆಯ ಪೊಲೀಸ್ ಸಹಾಯವಾಣಿ ಸಂಖ್ಯೆ: 9480804900, ಜಿಲ್ಲೆಯ ವಿಪತ್ತು ನಿರ್ವಹಣಾ ಘಟಕ ಸಂಖ್ಯೆ; 08272-221077 ಸಂಪರ್ಕಿಸಬಹುದಾಗಿದೆ. ಹಾಗೆಯೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಅತೀ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದರು.’

ಜಿಲ್ಲೆಯ ಪ್ರವಾಸಿ ತಾಣಗಳನ್ನು ಪ್ರವಾಸಿ ಸ್ನೇಹಿಯಾಗಿರುವಂತೆ ಕ್ರಮವಹಿಸಲು ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಮುಖ್ಯಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಹಾಗೂ ಹೋಂ-ಸ್ಟೇ, ರೆಸಾರ್ಟ್, ಅಸೋಸಿಯೇಷನ್ ಹಾಗೂ ಟೂರ್ ಅಂಡ್ ಟ್ರಾವೆಲ್ ಅಪರೇಟರ್‌ಗಳಿಗೆ ನಿರ್ದೇಶನ ನೀಡಿದರು.

ಕೊಡಗು ಜಿಲ್ಲಾಡಳಿತವು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಎಲ್ಲ ಸುರಕ್ಷತೆ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಪ್ರವಾಸಿಗರ ಸುರಕ್ಷತೆ ಮಾರ್ಗಸೂಚಿ ಬಗ್ಗೆ ಜಿಲ್ಲೆಯ ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳನ್ನು ನೀಡಿ ಜಾಗೃತಿ ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.’

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಮಾತನಾಡಿ ಜಿಲ್ಲೆಯಲ್ಲಿ 3500 ಕ್ಕೂ ಹೆಚ್ಚು ಹೋಂ ಸ್ಟೇಗಳು ಇದ್ದು, ಸದ್ಯ 2269 ಹೋಂಸ್ಟೇಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರವಾಸಿ ವೆಬ್‌ಸೈಟ್ ಅಪ್‌ಡೇಟ್ ಆಗಬೇಕು. ಇದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರು ವೆಬ್‌ಸೈಟ್‌ನಲ್ಲಿ ಹುಡುಕುವುದರಿಂದ ಸಹಕಾರಿಯಾಗಲಿದೆ ಎಂದು ಸಲಹೆ ಮಾಡಿದರು.

ಹೋಂ ಸ್ಟೇ ಅಸೋಸಿಯೇಷನ್‌ನ ಮೋಂತಿ ಗಣೇಶ್ ಅವರು ಮಾತನಾಡಿ ಹೋಂಸ್ಟೇಗಳ ನೋಂದಣಿ ಸಂಬಂಧ ಮತ್ತಷ್ಟು ಜಾಗೃತಿ ಮೂಡಿಸಬೇಕು. ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡುವಲ್ಲಿ ಶ್ರಮಿಸಲಾಗುವುದು ಎಂದರು.

ಅಂಬೆಕಲ್ಲು ನವೀನ್ ಅವರು ಮಾತನಾಡಿ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಅರಿವು ಅಗತ್ಯ ಎಂದರು. ತಹಸೀಲ್ದಾರರಾದ ಕಿರಣ್ ಗೌರಯ್ಯ, ಪ್ರವೀಣ್ ಕುಮಾರ್, ತಾ.ಪಂ.ಇಒ ಶೇಖರ್ ಇತರರು ಇದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ