ಸಂಸದ ಡಾ.ಕೆ.ಸುಧಾಕರ್ ಬೆಂಬಲಿಗರ ತೆಕ್ಕೆಗೆ ವಿಜಯ : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಗೆಲುವು

KannadaprabhaNewsNetwork | Updated : Mar 13 2025, 01:08 PM IST

ಸಾರಾಂಶ

ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ ಡಿ ಬ್ಯಾಂಕ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಬೆಂಬಲಿಗರ ಆಯ್ಕೆ

  ಚಿಕ್ಕಬಳ್ಳಾಪುರ : ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ ಡಿ ಬ್ಯಾಂಕ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಬೆಂಬಲಿಗರಾದ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದ ಗಂಗರೆ ಕಾಲುವೆ ಪ್ರಸಾದ್ ಅಧ್ಯಕ್ಷರಾಗಿ, ಪೆರೇಸಂದ್ರ ಪರಿಶಿಷ್ಟ ಜಾತಿ ವರ್ಗಕ್ಕೆ ಸ್ಪರ್ಧಿಸಿ ಜಯಗಳಿಸಿದ್ದ ರಾಮಪ್ಪರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಬುಧವಾರ ಆಯ್ಕೆಗೊಂಡರು.

ಆಡಳಿತ ಮಂಡಳಿಯು ಒಟ್ಟು 12 ಸ್ಥಾನಗಳನ್ನು ಹೊಂದಿದ್ದು, ಭಾರತೀಯ ಜನತಾ ಪಕ್ಷ ಮತ್ತು ಜೆಡಿಎಸ್ ನ ಎನ್ ಡಿಎ ಮೈತ್ರಿಕೂಟ ಹನ್ನೊಂದು ಸ್ಥಾನಗಳಲ್ಲಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಗಂಗರೆ ಕಾಲುವೆ ಪ್ರಸಾದ್ ಮತ್ತು ರಾಮಪ್ಪರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾ ಅಧಿಕಾರಿಗಳು ಘೋಷಿಸಿದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಗಂಗರೆ ಕಾಲುವೆ ಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈ ಹಿಂದೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷನಾಗಿ ಆರು ತಿಂಗಳ ಕಾಲ ಆಡಳಿತ ನಡೆಸಿದ ಅವಧಿಯಲ್ಲಿ ಬ್ಯಾಂಕ್ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೆ ಹಾಗೂ ಬ್ಯಾಂಕಿಗೆ ಬಂದ ಲಾಭಾಂಶದಲ್ಲಿ ಷೇರುದಾರರಿಗೆ ಪಾಲು ಸಹ ನೀಡಿದ್ದೆ. ಇದು ಪಿಎಲ್ಡಿ ಬ್ಯಾಂಕ್ ಇತಿಹಾಸದಲ್ಲಿಯೇ ಮೊದಲನೇ ಬಾರಿ ನಡೆದ ಸುಧಾರಣಾ ಕ್ರಮ ಆಗಿತ್ತು. ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲಾ ಎನ್ ಡಿಎ ನಿರ್ದೇಶಕರು ನನಗೆ ಸಂಪೂರ್ಣವಾಗಿ ಬೆಂಬಲ ನೀಡಿದ್ದು, ನನ್ನ ಅವಿರೋಧ ಆಯ್ಕೆಗೆ ಕಾರಣವಾಯಿತು. ನನ್ನ ಮುಂದಿನ ಅವಧಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಅನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಹಾಗೂ ಈಗಿರುವ ಬ್ಯಾಂಕ್ ಕಟ್ಟಡದ ಹಿಂಭಾಗದಲ್ಲಿ ಬ್ಯಾಂಕ್ ನ ಜಾಗದ ವಿವಾದ ಇದ್ದು, ಇದನ್ನು ಬಗೆಹರಿಸಿ ಅಲ್ಲಿಯೂ ಸಹ ಬ್ಯಾಂಕ್ ಕಟ್ಟಡ ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದರು.

ನನ್ನ ಆಯ್ಕೆಗೆ ಸಹಕರಿಸಿದ ಸಂಸದ ಡಾ.ಕೆ.ಸುಧಾಕರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪಿ.ಎನ್.ಕೇಶವ ರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಒಳಗೊಂಡಂತೆ ಎಲ್ಲಾ ಮುಖಂಡರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಎನ್ ಡಿಎ ಮೈತ್ರಿಕೂಟದ ಅಂಗ ಪಕ್ಷವಾದ ಜಾತ್ಯಾತೀತ ಜನತಾದಳ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮುಕ್ತಮುನಿಯಪ್ಪರವರು ಸಹ ತಮ್ಮ ಸಂಪೂರ್ಣ ಬೆಂಬಲವನ್ನು ಪ್ರಸಾದ್ ಮತ್ತು ರಾಮಪ್ಪರವರಿಗೆ ನೀಡಿರುವುದಾಗಿ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪಿ.ಎನ್. ಕೇಶವ ರೆಡ್ಡಿ ಮಾತನಾಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ, ಅರ್ಹ ಬಡ ರೈತರ ಅಭಿವೃದ್ಧಿಗೆ ಶ್ರಮಿಸಿ, ಪಿಎಲ್ ಡಿ ಬ್ಯಾಂಕ್ ಅನ್ನು ಈ ಹಿಂದಿನಂತೆ ನಂಬರ್ ಒನ್ ಸ್ಥಾನಕ್ಕೇರಿಸಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಶುಭ ಹಾರೈಸಿದರು.

ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ಜಮಾವಣೆಗೊಂಡು ಪಟಾಕಿ ಸಿಡಿಸಿ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಭಾರೀ ಗಾತ್ರದ ಹೂಮಾಲೆ ಹಾಕಿ ವಿಜಯೋತ್ಸವ ಆಚರಿಸಿದರು.

ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ. ನಾಗರಾಜ್, ಕೃಷಿ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮರಳು ಕುಂಟೆ ಕೃಷ್ಣಮೂರ್ತಿ, ಮುಖಂಡರಾದ ಪಿ. ಎನ್.ಮುನೇಗೌಡ, ಹರಿನಾಥರೆಡ್ಡಿ, ಅಗಲಗುರ್ಕಿ ಚಂದ್ರಶೇಖರ್, ಗಿರೀಶ್, ಮತ್ತಿತರರು ಇದ್ದರು.

Share this article