ಆಲೋಚನೆಗೆ ವೈಜ್ಞಾನಿಕ ತಳಹದಿ ಇರಲಿ: ಜಿಲ್ಲಾಧಿಕಾರಿ ಕರೆ

KannadaprabhaNewsNetwork | Published : Mar 1, 2025 1:03 AM

ಸಾರಾಂಶ

ಶುಕ್ರವಾರ ನಗರದ ಒಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ಮಂಡಳಿ, ಬಾರತೀಯ ವಿಜ್ಞಾನ ಸಂಸ್ಥೆ ಆವರಣ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ವೈಜ್ಞಾನಿಕ ಚಿಂತನೆಯನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಪ್ರತಿಯೊಂದು ಆಲೋಚನೆಗಳಿಗೂ ವೈಜ್ಞಾನಿಕ ತಳಹದಿ ಇರಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಶುಕ್ರವಾರ ನಗರದ ಒಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ಮಂಡಳಿ, ಬಾರತೀಯ ವಿಜ್ಞಾನ ಸಂಸ್ಥೆ ಆವರಣ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸರ್ ಸಿ.ವಿ.ರಾಮನ್ ಭಾವಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಮೂಢನಂಬಿಕೆಗಳನ್ನು ನಂಬಿ ಜೀವನ ನಡೆಸಬಾರದು. ಅದರ ಸತ್ಯಾನ್ವೇಷಣೆ ನಡೆಸಲು ಮುಂದಾಗಬೇಕು ಎಂದ ಜಿಲ್ಲಾಧಿಕಾರಿ, ಗ್ರಂಥಾಲಯಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ವಿಜ್ಞಾನಿಗಳು, ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರ ಆತ್ಮಚರಿತ್ರೆ ಓದುವುದರೊಂದಿಗೆ ಅವರ ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳು ಪಾಲಿಸುವುದರಿಂದ ಉತ್ತಮ ಜೀವನ ಹಾಗೂ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಆರ್ಟಿಫಿಶಿಯಲ್ ಇಂಟಲಿಜನ್ಸ್‌ನ್ನು ತಿಳಿದುಕೊಂಡು, ಅದನ್ನು ಜೀವನದ ಪ್ರತೀ ಹಂತದಲ್ಲಿಯೂ ಬಳಸಿಕೊಳ್ಳಲು ಮುಂದಾಗಬೇಕು ಎಂದರು.

ಕೃತಕ ಬುದ್ಧಿಮತ್ತೆಯನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದರು.

ಎಂ.ಐ.ಟಿ.ಯ ಆಶ್ವಥ್ ರಾವ್, ಡಾ. ಮುರುಳಿಕೃಷ್ಣ, ಡಾ. ನೇಹಾ ಗಾಂಧಿ, ಡಾ.ಕವಿತಾ ಹಾಗೂ ಡಾ. ಮೋಹನ್ ದಾಸ್ ಶೆಣೈ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಾಗೂ ಕೃತಕ ಬುದ್ದಿಮತ್ತೆ ಬಗ್ಗೆ ಮಾಹಿತಿ ನೀಡಿದರು.

ನಗರಸಭೆ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ, ಎನ್.ಆರ್.ಡಿ.ಎಮ್.ಎಸ್ ತಾಂತ್ರಿಕ ಅಧಿಕಾರಿ ವಿಕ್ರಮ್ ಆರ್‌. ಮತ್ತಿತರರಿದ್ದರು.

ಡಯಟ್ ಉಪ ಪ್ರಾಂಶುಪಾಲ ಅಶೋಕ್ ಕಾಮತ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Share this article