ಲಡ್ಡುವಿನಲ್ಲಿ ಶುದ್ಧವಾದ ತುಪ್ಪ ಬಳಸಿಲ್ಲ. ದನದ ಕೊಬ್ಬು ಹಾಗೂ ಮೀನಿನ ತುಪ್ಪ ಬಳಸಲಾಗುತ್ತಿದೆ ಎಂಬ ವಿಚಾರವನ್ನು ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದು ಇದು ಸಣ್ಣ ಆರೋಪವಲ್ಲ.
ಧಾರವಾಡ:ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಯಲ್ಲಿ ಶುದ್ಧ ತುಪ್ಪ ಬಳಸದೇ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿರುವ ವರದಿ ಬಹಿರಂಗಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ತಿಮ್ಮಪ್ಪನ ಕ್ಷೇತ್ರವನ್ನು ಗೋ ಮೂತ್ರದ ಮೂಲಕ ಶುದ್ಧೀಕರಣ ಮಾಡಿ ಪುನಃ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.ಧಾರವಾಡದಲ್ಲಿ ಮಾತನಾಡಿರುವ ಅವರು, ಲಡ್ಡುವಿನಲ್ಲಿ ಶುದ್ಧವಾದ ತುಪ್ಪ ಬಳಸಿಲ್ಲ. ದನದ ಕೊಬ್ಬು ಹಾಗೂ ಮೀನಿನ ತುಪ್ಪ ಬಳಸಲಾಗುತ್ತಿದೆ ಎಂಬ ವಿಚಾರವನ್ನು ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದು ಇದು ಸಣ್ಣ ಆರೋಪವಲ್ಲ. ಗುಜರಾತ್ ಪ್ರಯೋಗಾಲಯದ ವರದಿ ಹಾಗೂ ದಾಖಲೆ ಸಹ ಸಿಎಂ ಬಹಿರಂಗಪಡಿಸಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇದನ್ನು ಹಿಂದೂ ಸಮುದಾಯ ಕ್ಷಮಿಸುವುದಿಲ್ಲ. ತಿರುಪತಿ ತಿಮ್ಮಪ್ಪ ಸಹ ಕ್ಷಮಿಸದ ಅಪರಾಧವನ್ನು ಜಗನ್ ಮೋಹನ್ ರೆಡ್ಡಿ ಮಾಡಿದ್ದಾರೆ. ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಇಂತಹ ಭಕ್ತರಿಗೆ ದ್ರೋಹ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಈ ರೀತಿಯ ಘೋರ ಅಪರಾಧ ಮಾಡಿದವರನ್ನು ಎನ್ ಕೌಂಟರ್ ಮಾಡಬೇಕು. ಇದು ಕ್ರಿಮಿನಲ್ ಅಪರಾಧ. ಹಿಂದೂಗಳ ನಂಬಿಕೆ, ವಿಶ್ವಾಸಕ್ಕೆ ಆಘಾತ ಮಾಡುವ ಕೆಲಸವಾಗಿದೆ. ತಪ್ಪಿತಸ್ಥರ ಮೇಲೆ ಕೋರ್ಟ್ ಸೆಕ್ಷನ್ ಹಾಕಿದರೆ ಸಾಲದು. ಕಠಿಣ ಕ್ರಮ ಆಗಬೇಕು. ಇದೇ ಲಡ್ಡುವಿನಲ್ಲಿ ವಿಷ ಹಾಕಿದ್ರಾ? ಸ್ಲೋ ಪಾಯಿಸನ್ ಹಾಕಿದ್ರಾ? ಇದೆಲ್ಲ ತನಿಖೆಯಾಗಬೇಕು. ಅದನ್ನೆಲ್ಲ ಹಾಕುವಂತಹ ನೀಚ ಬುದ್ಧಿ, ಪ್ರವೃತ್ತಿ ಇವತ್ತಿನ ರಾಜಕಾರಣದಲ್ಲಿದೆ. ವೈ.ಎಸ್. ರಾಜಶೇಖರ ರೆಡ್ಡಿ ಅಲ್ಲಿನ ಬೆಟ್ಟಗಳನ್ನು ಕ್ರಿಶ್ಚಿಯನ್‌ರಿಗೆ ಕೊಟ್ಟಿದ್ದರು. ಜಗನ್ ಹೀನಾಯವಾಗಿ ಸೋತಿದ್ದಾರೆ. ತಿಮ್ಮಪ್ಪನ ಕ್ಷೇತ್ರವನ್ನು ಗೋ ಮೂತ್ರದ ಮೂಲಕ ಶುದ್ಧೀಕರಣ ಮಾಡಿ ಪುನಃ ಪ್ರತಿಷ್ಠಾಪನೆ ಮಾಡಬೇಕು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.