ಹುಬ್ಬಳ್ಳಿ: ಸನಾತನ ಹಿಂದೂ ಧರ್ಮದ ರಕ್ಷಣೆಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು. ಯಾವುದೇ ಪಕ್ಷ ಇದ್ದರೂ ರಾಜಕೀಯ ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಅದರಲ್ಲಿ ಧರ್ಮ ಬೆರಸಬೇಡಿ ಎಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.ಇಲ್ಲಿನ ನೇಕಾರ ನಗರದ ಬಸವೇಶ್ವರ ವೃತ್ತದಲ್ಲಿ ಭಾನುವಾರ ಸಂಜೆ ದಸರಾ ಹಬ್ಬದ ನಿಮಿತ್ತ ಹಿಂದು ಜಾಗರಣ ವೇದಿಕೆ ಹುಬ್ಬಳ್ಳಿ ಮಹಾನಗರ ಘಟಕದಿಂದ ನಡೆದ ದುರ್ಗಾ ದೌಡ್ ಸಮಾರೋಪದಲ್ಲಿ ಮಾತನಾಡಿದರು.
ಇಂದು ಸಂಘಟನೆ ಭಾವ ಇಲ್ಲದಾಗಿದೆ. ನಮ್ಮ ನಡುವೆ ಒಡಕು ಮೂಡಲು ಆಸ್ಪದ ನೀಡಬಾರದು. ಸಧ್ಯ ರಾಮ ಮಂದಿರ ನಿರ್ಮಾಣವಾಗಿ ರಾಮನ ಪ್ರತಿಷ್ಠಾಪನೆಯಾಗಿದ್ದು, ಇದೀಗ ಮನೆ ಮನೆ ಅಯೋಧ್ಯೆಯಾಗಬೇಕು ಎನ್ನುವುದು ನಮ್ಮ ಮುಂದಿನ ಸಂಕಲ್ಪವಾಗಬೇಕು. ಒಂದು ಬಾರಿ ಧರ್ಮ ಜಾಗೃತಿ ಆದರೆ ನಮ್ಮ ಸನಾತನ ಧರ್ಮವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಹುಟ್ಟಿ ಅದರ ವಿರುದ್ಧ ಮಾತನಾಡುವವರ ವಿರುದ್ಧ ನಾವು ಎಚ್ಚರಗೊಳ್ಳಬೇಕು ಎಂದರು.
ನ್ಯಾಯವಾದಿ ರಾಮಚಂದ್ರ ಮಟ್ಟಿ, ಉದ್ಯಮಿ ಸಂತೋಷ ಶೆಟ್ಟಿ ಮಾತನಾಡಿದರು. ಈ ವೇಳೆ ಗಜಾನನ ಕಬಾಡೆ ಸೇರಿದಂತೆ ಹಲವರಿದ್ದರು.ಅದ್ಧೂರಿಯಾಗಿ ನಡೆದ ದುರ್ಗಾ ದೌಡ್
ದಸರಾ ಹಬ್ಬದ ನಿಮಿತ್ತ ಹಿಂದು ಜಾಗರಣ ವೇದಿಕೆ ಹುಬ್ಬಳ್ಳಿ ಮಹಾನಗರ ಘಟಕದಿಂದ ಶನಿವಾರ ಅದ್ಧೂರಿಯಾಗಿ ದುರ್ಗಾ ದೌಡ್ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಇಲ್ಲಿನ ಚನ್ನಪೇಠದ ಮುಖ್ಯ ರಸ್ತೆಯಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಜಂಗ್ಲಿ ಪೇಟೆ, ಬಾಣತಿಕಟ್ಟೆ ಮೂಲಕ ನೇಕಾರ ನಗರದ ಬಸವೇಶ್ವರ ವೃತ್ತದ ವರೆಗೂ ಸಾಗಿ ಸಮಾರೋಪಗೊಂಡಿತು.ದುರ್ಗಾ ದೌಡ್ನಲ್ಲಿ ಸಾವಿರಾರು ಯುವಕ-ಯುವತಿಯರು ಕೇಸರಿ ಬಿಳಿ ವಸ್ತ್ರದಾರಿಗಳಾಗಿ ಕೇಸರಿ ಬಾವುಟ, ಖಡ್ಗ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದುರ್ಗಾ ಮಾತೆಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮಾರ್ಗದದ್ದುಕ್ಕೂ ಸಾರ್ವಜನಿಕರು ದುರ್ಗಾದೌಡ್‌ಗೆ ಹೂ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.