ದೇಶದ ಐಕ್ಯತೆಗೆ ಎಲ್ಲರೂ ಒಗ್ಗಟ್ಟಿನಿಂದ ಇರೋಣ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ

KannadaprabhaNewsNetwork | Published : May 16, 2025 1:59 AM
Follow Us

ಸಾರಾಂಶ

ಹಾವೇರಿಯ ಹೊಸಮಠ ಬಳಿಯ ಬಸವೇಶ್ವರ ವೃತ್ತದಲ್ಲಿ ಗುರುವಾರ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ರಕ್ತದಾನ ಶಿಬಿರ ನಡೆಯಿತು.

ಹಾವೇರಿ: ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕವು ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ದೇಶದ ಐಕ್ಯತೆ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.ನಗರದ ಹೊಸಮಠ ಬಳಿಯ ಬಸವೇಶ್ವರ ವೃತ್ತದಲ್ಲಿ ಗುರುವಾರ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪಾಕಿಸ್ತಾನಕ್ಕೆ ಕದನ ವಿರಾಮ ಉಲ್ಲಂಘಿಸುವುದು ರೂಢಿಯಾಗಿದ್ದು, ಈ ಬಾರಿ ನಮ್ಮ ಯೋಧರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ರಕ್ತದಾನ ಮಾಡುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಮ್ಮ ಯುವ ಕಾಂಗ್ರೆಸ್ ಘಟಕದವರು ಮಾಡುತ್ತಿದ್ದಾರೆ ಎಂದರು.

ಇಂದಿನ ದಿನಗಳಲ್ಲಿ ಹನಿ ರಕ್ತವು ಅತೀ ಅವಶ್ಯಕವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡುವ ಮೂಲಕ ಜೀವ ರಕ್ಷಣೆಗೆ ಕೈಜೋಡಿಸಬೇಕು. ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ದರ್ಶನಕುಮಾರ ಲಮಾಣಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಅವರ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕವು ಜಿಲ್ಲಾದ್ಯಂತ ರಕ್ತದಾನ ಶಿಬಿರ ಉದ್ಯೋಗ ಮೇಳ, ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಬೇಕು. ನಿಮ್ಮೆಲ್ಲರ ಕಾರ್ಯಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ಯುವ ಕಾಂಗ್ರೆಸ್ ಪದಾಧಿಕಾರಿಗಳು ನಮ್ಮ ದೇಶದ ಸೈನಿಕರಂತೆ ಕೆಲಸ ಮಾಡಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದರು.

ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ದರ್ಶನಕುಮಾರ ಲಮಾಣಿ ಮಾತನಾಡಿ, ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಲ್ಲದೇ ಗುರುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ದೇಶವು ಸಂದಿಗ್ಧ ಸಮಯದಲ್ಲಿದ್ದು, ಈ ವೇಳೆ ಯುವಕರು ನಮ್ಮ ದೇಶದ ಸೈನಿಕರಿಗೆ ಹೆಗಲು ಕೊಟ್ಟು ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ. ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ರಕ್ತವನ್ನು ನೀಡಬೇಕು. ನಮಗಾಗಿ ಅವರು ದೇಶದ ಗಡಿಯಲ್ಲಿ ಹೋರಾಡಿ ಪ್ರಾಣತ್ಯಾಗ ಮಾಡುತ್ತಾರೆ. ಅವರಿಗಾಗಿ ದೇಶದ ಯುವಕರು ರಕ್ತದಾನ ಮಾಡುವ ಮೂಲಕ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು. ರಾಣಿಬೆನ್ನೂರು ತಾಲೂಕಿನ ಯುವ ಘಟಕದ ಅಧ್ಯಕ್ಷ ಬೀರಪ್ಪ ಲಮಾಣಿ ಮಾತನಾಡಿದರು. ಶಿಬಿರದಲ್ಲಿ ಸುಮಾರು 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ದರ್ಶನಕುಮಾರ ಲಮಾಣಿ, ನಗರಸಭೆ ಸದಸ್ಯರಾದ ರೇಣುಕಾ ಪುತ್ರಿನ್, ಉಮೀದ್ ನದಾಫ್, ಸಿಪಿಐ ಮೋತಿಲಾಲ್ ಪವಾರ, ಸಿದ್ದು ಪುರದ, ಶ್ರೀಧರ ದೊಡ್ಡಮನಿ ಸೇರಿದಂತೆ ಇತರರು ಇದ್ದರು. ಯುವ ಮುಖಂಡ ಸುಧೀರ ಲಮಾಣಿ ಸ್ವಾಗತಿಸಿ, ನಿರೂಪಿಸಿದರು.