ರಾಮನಗರ: ಮಾತೃ ಭಾಷೆ ಕನ್ನಡವನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಯವರು ಹಾಗೂ ಈ ನಾಡಿನಲ್ಲಿ ವಾಸಮಾಡುವ ಎಲ್ಲಾ ಜನರು ಕೂಡ ಅದನ್ನು ಬಳಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ರಮವಹಿಸುತ್ತೇವೆ. ನಮ್ಮ ಭಾಷೆಯನ್ನು ಬೆಳೆಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ಸಂಭ್ರಮ 50 ವರ್ಷವಾದ ಈ ಸಮಯವನ್ನು ನಾವೆಲ್ಲರೂ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸೋಣ. ಕನ್ನಡ ಭಾಷೆಯ ಹಿರಿಮೆಯನ್ನು ನಾಡಿನೆಲ್ಲೆಡೆ ಪಸರಿಸೋಣ ಎಂದರು. ಕರ್ನಾಟಕ ನಾಡಿನಲ್ಲಿ ವಾಸ ಮಾಡುವ ಮಾತೃಭಾಷೆಯನ್ನಾಡುವ ಕನ್ನಡಿಗರಾದ ನಾವು, ನಮ್ಮ ಭಾಷೆಯನ್ನು ದಿನನಿತ್ಯದ ಚಟುವಟಿಕೆಯಲ್ಲಿ ಬಳಸುವುದರ ಮೂಲಕ ನಮ್ಮ ಭಾಷೆಯನ್ನು ಬೆಳಸಬೇಕು. ಈಗಾಗಲೇ ಬೆಂಗಳೂರಿನಲ್ಲಿ ಹಲವು ಭಾಷೆಗಳನ್ನಾಡುವ ಜನರಿದ್ದು, ಅವರಿಗೂ ಕನ್ನಡ ಭಾಷೆಯನ್ನು ಕಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ನಾವೆಲ್ಲರೂ ಈ ವರ್ಷ ಅಂದರೆ 2023-24ನೇ ಸಾಲನ್ನು ಕರ್ನಾಟಕ ಸಂಭ್ರಮ- 50 ಎಂದು ರಾಜ್ಯಾದ್ಯಂತ ಆಚರಣೆ ಮಾಡುತ್ತಿರುವಂತೆ ರಾಮನಗರ ಜಿಲ್ಲೆಯಲ್ಲಿ ನಾವು ಕೂಡ ಆಚರಣೆ ಮಾಡುವುದರ ಮೂಲಕ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಕೀರ್ತಿಯನ್ನು ನಾಡಿನೆಲ್ಲೆಡೆ ಬೆಳಗಬೇಕು ಎಂದರು. ಜಿಲ್ಲೆಯ ಸಾಹಿತಿ, ಲೇಖಕರನ್ನು ಸ್ಮರಿಸುವುದು ಔಚಿತ್ಯಪೂರ್ಣವಾಗಿದೆ. ಇದಲ್ಲದೆ ನಾಡು-ನುಡಿ ಬಗ್ಗೆ ನಿರಂತರ ಹೋರಾಟ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಅಸಂಖ್ಯಾತ ಲೇಖಕ-ಲೇಖಕಿಯರನ್ನು, ಸಂಘ ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು, ಕನ್ನಡ ಕಟ್ಟಾಳುಗಳ ಸೇವೆಯನ್ನು ಸ್ಮರಿಸಬೇಕು. ಮೌರ್ಯರು, ಗಂಗರು, ಕದಂಬರು, ಹೊಯ್ಸಳರು, ವಿಜಯನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು, ಬಹಮನಿ ಸುಲ್ತಾನರು, ನಿಜಾಮರು ಮುಂತಾದ ಅನೇಕ ರಾಜಮನೆತನಗಳು ಈ ನಾಡನ್ನು ಆಳಿವೆ. ಈ ಮನೆತನಗಳು ಕನ್ನಡ ನಾಡುನುಡಿಗೆ ನೀಡಿದ ಕೊಡುಗೆಗಳು ಅನನ್ಯ ಎಂದರು. ಕನಕರು, ಪುರಂದರರಾದ ದಾಸಶ್ರೇಷ್ಠರು, ಸರ್ವಜ್ಞ, ಸಂತ ಶಿಶುನಾಳ ಷರೀಫ್ ಅವರಂತಹ ಸಂತ ಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು ಸೇರಿದಂತೆ ಶರಣರು, ವಚನಕಾರರು, ಬಾಳಿ ಬದುಕಿದ ನೆಲ ನಮ್ಮದು. ಈ ಎಲ್ಲಾ ಮಹನೀಯರು ಕನ್ನಡ ಭಾಷೆಗೆ ನೀಡಿದ ಕೊಡುಗೆಗಳು ಅಪಾರ. ದಾಸಸಾಹಿತ್ಯ, ವಚನಸಾಹಿತ್ಯ ಹಿಂದೆಯೂ ಅನ್ವಯವಾಗುತ್ತಿತ್ತು. ಇಂದಿಗೂ ಅನ್ವಯ ಹಾಗೂ ಮುಂದೆಯೂ ಅನ್ವಯವಾಗುವಂತೆ ಕನ್ನಡ ಸಾಹಿತ್ಯವಾಗಿ ವಿಶ್ವಪ್ರಸಿದ್ಧವಾಗಿದೆ. ಕನ್ನಡ ನಾಡು ವಿವಿಧ ಧರ್ಮ-ಸಂಸ್ಕೃತಿಗಳ ಸಮಾಗಮವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು, ಸಿಖ್ಖರು, ಮುಂತಾದ ಎಲ್ಲಾ ಧರ್ಮಿಯರು, ಧರ್ಮ ಸಹಿಷ್ಣುತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಅಂತೆಯೇ ದೇಶದಲ್ಲಿ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿರುವ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಸಾಹಿತ್ಯಕ್ಕೆ ಇಂದು 8 ಜ್ಞಾನಪೀಠ ಪ್ರಶಸ್ತಿ-ಪುರಸ್ಕಾರಗಳು ಸಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಪೊಲೀಸ್, ಶಾಲಾ ಮಕ್ಕಳು ಪಥ ಸಂಚಲನ ನಡೆಸಿದರು. ಇದರಲ್ಲಿ ಉತ್ತಮ ಕವಾಯಿತು ತಂಡಗಳಿಗೆ ಸಚಿವರು ಬಹುಮಾನ ವಿತರಿಸಿದರು. ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಶಾಸಕ ಇಕ್ಬಾಲ್ ಹುಸೇನ್ , ಜಿಲ್ಲಾಧಿಕಾರಿ ಅವಿನಾಶ್ , ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಕೋಟ್ ............... ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50 ವರ್ಷ ಪೂರ್ಣಗೊಂಡಿದ್ದು, ನಾಡಿನೆಲ್ಲಡೆ ಸಂಭ್ರಮ ಮನೆ ಮಾಡಿದೆ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಘೋಷವಾಕ್ಯದೊಂದಿಗೆ ಕರ್ನಾಟಕ ಸಂಭ್ರಮ- 50 ಅಭಿಯಾನದ ಅಂಗವಾಗಿ ಮುಂದಿನ ಒಂದು ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. - ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು, ರಾಮನಗರ 1ಕೆಆರ್ ಎಂಎನ್ 2,3,4.ಜೆಪಿಜಿ 2.ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. 3.ಕವಾಯಿತು ತಂಡಗಳಿಗೆ ಸಚಿವ ರಾಮಲಿಂಗಾರೆಡ್ಡಿ ಗೌರವ ಸಲ್ಲಿಸಿದರು. 4.ಉತ್ತಮ ಕವಾಯಿತು ತಂಡಕ್ಕೆ ಸಚಿವ ರಾಮಲಿಂಗಾರೆಡ್ಡಿ ಬಹುಮಾನ ವಿತರಿಸಿದರು. ----------------------------------