ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ: ಶಾಸಕ ಬಾಬಾಸಾಹೇಬ

KannadaprabhaNewsNetwork | Published : Mar 10, 2025 12:16 AM

ಸಾರಾಂಶ

ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಸದೃಢ ಸಮಾಜ ನಿರ್ಮಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.‌ ಆದ್ದರಿಂದ ಯುವ ಸಮುದಾಯ ಸದೃಢ ಸಮಾಜದ ದಿಕ್ಕಿನತ್ತ ಸಾಗಬೇಕಿದೆ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಸದೃಢ ಸಮಾಜ ನಿರ್ಮಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.‌ ಆದ್ದರಿಂದ ಯುವ ಸಮುದಾಯ ಸದೃಢ ಸಮಾಜದ ದಿಕ್ಕಿನತ್ತ ಸಾಗಬೇಕಿದೆ ಎಂದು ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.

ತಾಲೂಕಿನ ನಾವಲಗಟ್ಟಿ ಗ್ರಾಮದಲ್ಲಿ ರಸ್ತೆ ಹಾಗೂ ಶ್ರೀ ಮಾರುತಿ ದೇವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾನುವಾರ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.

ಬದಲಾಗುತ್ತಿರುವ ಸಮಾಜದಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಭಾರತ ಹಳ್ಳಿಗಳಿಂದ ಕೂಡಿದ ದೇಶವಾಗಿದೆ. ಅಲ್ಲದೇ ಹಳ್ಳಿಗಳಲ್ಲಿ ವಾಸಿಸುವ ಜನರು ಜಾತಿ, ಧರ್ಮ,‌ ಆಚಾರ,‌ ವಿಚಾರದ ಭೇದಭಾವ ಇಲ್ಲದೇ ಒಗ್ಗಟ್ಟಿನಿಂದ ಬದುಕು ಸಾಗಿಸುತ್ತಾ ಬಂದಿದ್ದಾರೆ. ಆದ್ದರಿಂದ ನಮ್ಮ ಹಿರಿಯರು ಬದುಕು ಸಾಗಿಸಿಕೊಂಡು ಬಂದಂತೆ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕಿದೆ ಎಂದರು. ಗ್ರಾಮಗಳ ಅಭಿವೃದ್ಧಿ ವಿಷಯದಲ್ಲಿ ನಾವು ಎಂದಿಗೂ ರಾಜಕಾರಣ ಮಾಡುವುದಿಲ್ಲ. ಅದರಂತೆ ಗ್ರಾಮಸ್ಥರು ಅಭಿವೃದ್ಧಿ ಹಾಗೂ ಸದೃಢ ಸಮಾಜವನ್ನಷ್ಟೇ ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ರಾಜ್ಯದಲ್ಲಿನ ಸರ್ಕಾರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಅನುದಾನವನ್ನು ನೀಡುತ್ತಿದೆ. ಆದ್ದರಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದರು.

ಗ್ರಾಮದ ಹಿರಿಯ ಮುಖಂಡ ಬಾಬು ಕಲ್ಲೂರ ಮಾತನಾಡಿ, ರಸ್ತೆ ನಿರ್ಮಾಣ ಕಾಮಗಾರಿಗೆ ಈ ಹಿಂದೆ ಸುಮಾರು ಐದು ಬಾರಿ ಭೂಮಿ ಪೂಜೆ ಮಾಡಲಾಗಿತ್ತು. ಆ ಕಾಮಗಾರಿ ಪೂಜೆಗೆ ಸಿಮೀತವಾಗಿದೆ. ಆದ್ದರಿಂದ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದ ಜತೆಗೆ ತ್ವರಿತವಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ₹2.5 ಕೋಟಿ ವೆಚ್ಚದಲ್ಲಿ ನಾವಲಗಟ್ಟಿ- ಹಿರೇಮೇಳೆ ಸಂಪರ್ಕ ರಸ್ತೆ, ‌₹50 ಲಕ್ಷ ನಾವಲಗಟ್ಟಿ -ಪುನರ್ವಸತಿ ಕೇಂದ್ರ-1ರ ಸಂಪರ್ಕ ರಸ್ತೆ ಹಾಗೂ ₹15 ಲಕ್ಷ ವೆಚ್ಚದಲ್ಲಿ ಶ್ರೀ ಮಾರುತಿ‌ದೇವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು. ಬಳಿಕ ಪುಲಾರಕೊಪ್ಪ, ಗಣಿಕೊಪ್ಪ, ಮರಿಕಟ್ಟಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಿವಾನಂದ ಕಲ್ಲೂರ, ಮಹಾಂತೇಶ ಯರಗಣವಿ, ರವಿ ಕಲ್ಲೂರ, ದೀಪಾ ಮರೆಣ್ಣವರ, ಶಾಂತವ್ವ ಉಪ್ಪಾರಟ್ಟಿ, ಪಿಡಿಒ ಎನ್.ಕೆ.ಮಾಳಗಿ, ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್.ತೌಫಿಕ್, ಗ್ರಾಮದ ಮುಖಂಡರಾದ ಗೌಡಪ್ಪ ನಾವಲಗಟ್ಟಿ, ಕುಮಾರ ಬಾಂವಿ, ಸಿದ್ದಯ್ಯ ಹಿರೇಮಠ, ಶಂಕರ ಕಲ್ಲೂರ, ಯಲ್ಲಪ್ಪ ಉಪ್ಪಾರಟ್ಟಿ, ವೀರಭದ್ರಯ್ಯ ವಿರಕ್ತಮಠ ಅರ್ಜುನ ಹುದಲಿ, ಕಲಗೌಡ ಕಲ್ಲೂರ, ರುದ್ರಪ್ಪ ಹುದಲಿ, ಸಿದ್ರಾಮಯ್ಯ ಚಿಕ್ಕಮಠ, ಚಂದ್ರನಾಯ್ಕ ಮರೇದ, ಬಸಪ್ಪ ಮರೆಣ್ಣವರ, ಬಸವರಾಜ ಮೋಡಿ, ಗುತ್ತಿಗೆದಾರರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Share this article