ದಾಬಸ್‍ಪೇಟೆ: ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಗಳನ್ನು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ಎದುರಿಸಲಿದ್ದು, ನೆಲಮಂಗಲ ತಾಲೂಕಿನಲ್ಲಿ ಎನ್‌ಡಿಎ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಸೋಂಪುರ ತಾಪಂ ಸಾಮಾನ್ಯ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಒಕ್ಕೊರಲಿನಿಂದ ಎಡೇಹಳ್ಳಿ ತೀರ್ಥಪ್ರಸಾದ್ ಅವರನ್ನು ಘೋಷಿಸಿದ್ದೇವೆ ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ತೀರ್ಥಪ್ರಸಾದ್ ಮಾತನಾಡಿ, ನಾನು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತನಾಗಿ, ಹೋಬಳಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯಿಂದ ಪಕ್ಷ ಸಂಘಟಿಸುತ್ತಿದ್ದೇನೆ. ಅದಲ್ಲದೆ ಗ್ರಾಪಂ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವವಿದ್ದು, ಈ ಬಾರಿ ತಾಪಂ ಸಾಮಾನ್ಯ ಕ್ಷೇತ್ರದ ಮೈತ್ರಿಕೂಟದ ಎನ್ ಡಿಎ ಅಭ್ಯರ್ಥಿಯಾಗಿ ಒಕ್ಕೊರಲಿನಿಂದ ಆಯ್ಕೆ ಮಾಡಿದ್ದಕ್ಕೆ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ತಾಲೂಕಿನ ಎಲ್ಲಾ ಜಿಪಂ ಹಾಗೂ ತಾಪಂಗಳಿಗೆ ಎರಡೂ ಪಕ್ಷದ ಮುಖಂಡರ ಅಭಿಪ್ರಾಯ ಪಡೆದು ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ. ಜಿಪಂ, ತಾಪಂ ಚುನಾವಣೆ ಘೋಷಣೆ ನಂತರ ಮೈತ್ರಿಕೂಟದ ನಾಯಕರು ತಾಲೂಕಿಗೆ ಬಂದು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ನಮ್ಮ ಮುಖಂಡರು ಇಂದಿನಿಂದಲೇ ಚುನಾವಣೆಗೆ ಸಿದ್ದರಾಗಬೇಕಿದೆ ಎಂದರು.ಸಭೆಯಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಜಗಜ್ಯೋತಿ ಬಸವೇಶ್ವರ, ನಿರ್ದೇಶಕ ಶಶಿಧರ್, ಗ್ರಾಪಂ ಮಾಜಿ ಅಧ್ಯಕ್ಷ ಪ್ರಭುದೇವ್, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಗ್ರಾಪಂ ಮಾಜಿ ಅಧ್ಯಕ್ಷ ಉಮಾಶಂಕರ್, ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಅಲ್ಪಯ್ಯನಪಾಳ್ಯ ವೆಂಕಟೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಬೈರೇಶ್, ಮಾಜಿ ಸದಸ್ಯರಾದ ಸತೀಶ್, ನಿಡವಂದ ಕುಮಾರ್, ಮರಿಯಪ್ಪಗೌಡ ಸೇರಿದಂತೆ ಮೈತ್ರಿಕೂಟದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸೋಂಪುರ ಹೋಬಳಿಯ ಎಡೇಹಳ್ಳಿ ತೀರ್ಥಪ್ರಸಾದ್ ಸ್ವಗೃಹದಲ್ಲಿ ಎನ್ ಡಿಎ ಮುಖಂಡರು-ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿದರು.