ಹಳಿಯಾಳ: ಕನಕದಾಸರ ಸಂದೇಶವನ್ನು ಕೇವಲ ಭಕ್ತಿಯ ಪರಿಧಿಯಲ್ಲಿ ಸೀಮಿತಗೊಳಿಸದೆ, ಸಮಾನತೆ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ವೈಚಾರಿಕ ಪ್ರಜ್ಞೆಯ ವಿಶಾಲ ನೆಲೆಯಲ್ಲಿ ಅರ್ಥೈಸಿಕೊಳ್ಳುವ ಮೂಲಕ, ಜಾತಿ ಭೇದಗಳಿಲ್ಲದ, ಮನುಷ್ಯ ಮನುಷ್ಯನನ್ನು ಗೌರವಿಸುವಂತಹ ಸುಂದರ ಸಮಾಜವನ್ನು ನಿರ್ಮಿಸೋಣ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್ ಪ್ರಸನ್ನ ಹೇಳಿದರು.
ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಕಟ್ಟಿ ಮಾತನಾಡಿ, ಇಂದಿನ ಹಾಗೂ ಭವಿಷ್ಯದ ಪೀಳಿಗೆಗೆ ದಾರ್ಶನಿಕರು ಮತ್ತು ಶ್ರೇಷ್ಠ ಸಂತರ ಪರಿಚಯ ಮಾಡಿಸಲು ಸರ್ಕಾರ ನಡೆಸುತ್ತಿರುವ ಜಯಂತ್ಯುತ್ಸವದ ಕ್ರಮ ಸೂಕ್ತವಾಗಿದೆ ಎಂದರು.
ಕನಕದಾಸರ ವೈಚಾರಿಕ ಸಂದೇಶ: ಉಪನ್ಯಾಸಕ ಶಾಂತಾರಾಮ ಚಿಬುಲಕರ ಅವರು ಉಪನ್ಯಾಸ ನೀಡಿ, ಕನಕದಾಸರನ್ನು ಕೇವಲ ಕೀರ್ತನೆಗಳ ರಚನೆಕಾರರಾಗಿ ಕಾಣಬಾರದು. ಅವರ ಕೀರ್ತನೆಗಳಲ್ಲಿ ಅಡಗಿರುವ ಮಾನವನ ಒಳಜಗತ್ತು, ಸಮಾಜದ ಅಸಮಾನತೆ, ನೈತಿಕತೆ ಮತ್ತು ಬದುಕಿನ ಸತ್ಯವನ್ನು ಅರಿಯಬೇಕು ಎಂದರು.ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ 2025- 26ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಶಾಂತಾರಾಮ ಚಿಬುಲಕರ ಮತ್ತು ಉತ್ತರ ಕನ್ನಡ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಪ್ಪ ಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಭವ್ಯ ಶೋಭಾಯಾತ್ರೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮೈಲಾರಲಿಂಗ ದೇವಸ್ಥಾನದಿಂದ ತಾಲೂಕಾಡಳಿತ ಸೌಧದವರೆಗೆ ಕನಕದಾಸರ ಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಕುರುಬ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಿವಪುರ ಗ್ರಾಮದ ಡೊಳ್ಳು ವಾದ್ಯಗಳ ಸಂಗೀತಕ್ಕೆ ಹಳದಿ ಭಂಡಾರವನ್ನು ಎರಚುತ್ತಾ ಜನರು ಸಂಭ್ರಮಿಸಿದರು.