ಕುಷ್ಟಗಿ: ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಜಗದ್ಗುರು ರೇಣುಕಾಚಾರ್ಯರ ಸಂದೇಶದಂತೆ ಎಲ್ಲ ಜಾತಿ, ಧರ್ಮದವರು ಸಾಮರಸ್ಯದಿಂದ ಬದುಕು ಸಾಗಿಸಬೇಕು ಎಂದು ಕೇಸೂರು ಹಿರೇಮಠದ ಚಂದ್ರಶೇಖರ ದೇವರು ಅಭಿಪ್ರಾಯಪಟ್ಟರು.
ಅಂತರಂಗ ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟ ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶ ಗಾತ್ರಗಳನ್ನು ಶೋಧಿಸಿ ಭಕ್ತರನ್ನು ಉದ್ಧರಿಸಿದರು. ಮಹಾಜ್ಞಾನಿ ಅಗಸ್ತ್ಯ ಮಹರ್ಷಿಗಳಿಗೆ ಶಿವಾದ್ವೆತ ತತ್ವ ಸಿದ್ಧಾಂತವನ್ನು ಬೋಧಿಸಿ ಹರಸಿದವರು ಎಂದರು.
ಧಾರ್ಮಿಕ ಕ್ರಾಂತಿಯ ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ಅಸ್ಪೃಶ್ಯರ ಉದ್ಧಾರ ಮತ್ತು ಮಹಿಳೆಯರಿಗೆ ಧಾರ್ಮಿಕ ಆಚರಣೆಗಳನ್ನಿತ್ತು ಹರಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಕಾಯಕ ಮತ್ತು ದಾಸೋಹದ ಮೂಲಕ ಸಕಲರಿಗೂ ಯಶಸ್ಸನ್ನು ಉಂಟು ಮಾಡಿದರು. ಮಹಿಳೆಯರಿಗೆ ಮತ್ತು ರೈತ ಸಮುದಾಯಕ್ಕೆ ಅವರು ಕೊಟ್ಟ ಕೊಡುಗೆ ಅಮೂಲ್ಯವಾದದ್ದು ಎಂದರು.ಅದ್ಧೂರಿ ಮೆರವಣಿಗೆ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಚಂದ್ರಶೇಖರ ಶಿವಾಚಾರ್ಯರ 29ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳಲ್ಲಿ ಭಾವಚಿತ್ರಗಳ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು. ನೂರಾರು ಮಹಿಳೆಯರು ಕುಂಭ ಹಾಗೂ ಕಳಶಗಳನ್ನು ಹಿಡಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರ ಮನೆಯ ಮುಂದೆ ಸ್ವಚ್ಛತೆಯನ್ನು ಮಾಡಿ ರಂಗೋಲಿಯನ್ನು ಬಿಡಿಸಲಾಗಿತ್ತು. ಮಾರ್ಗ ಮಧ್ಯೆ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಪಾನಕ, ಮಜ್ಜಿಗೆ, ಶರಬತ್ ವ್ಯವಸ್ಥೆ ಮಾಡಲಾಗಿತ್ತು.
ಶಿವಪ್ರಸಾದ ದೇವರು, ಲಾಡಮುಗುಳಿ ಸ್ವಾಮಿಗಳು, ತೆಲಂಗಾಣದ ವಿರೂಪಾಕ್ಷ ದೇವರು, ಮಲ್ಲಿಕಾರ್ಜುನ ಕೇರಕ್ನಳ್ಳಿ, ಕೃಷ್ಣ ಮಳ್ಳಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು, ಗ್ರಾಮಸ್ಥರು, ಮಹಿಳೆಯರು ಮಕ್ಕಳು ಇದ್ದರು.