ದಾವಣಗೆರೆ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಮಾಡೋಣ: ಎಸ್ಸೆಸ್ಸೆಂ

KannadaprabhaNewsNetwork |  
Published : Nov 12, 2026, 01:30 AM IST
  11 ಜೆ.ಜಿಎಲ್‌ .1) ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಛಲವಾದಿ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರವನಿತೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮವನ್ನುಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಎಲ್ಲ ಘಟನೆಗಳನ್ನು ನಾನು ಮರೆತಿದ್ದೇನೆ. 2028 ಚುನಾವಣೆಯಲ್ಲಿ ಮತ್ತೊಮ್ಮೆ ದಾವಣಗೆರೆ ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ಮಾಡಲು ನಾವು, ನೀವೆಲ್ಲರೂ ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದ್ದಾರೆ.

- ಉಪ ಚುನಾವಣೆ ಘಟನೆಗಳ ಮರೆತಿದ್ದೇನೆ, ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸೋಣ ಎಂದ ಸಚಿವ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಎಲ್ಲ ಘಟನೆಗಳನ್ನು ನಾನು ಮರೆತಿದ್ದೇನೆ. 2028 ಚುನಾವಣೆಯಲ್ಲಿ ಮತ್ತೊಮ್ಮೆ ದಾವಣಗೆರೆ ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ಮಾಡಲು ನಾವು, ನೀವೆಲ್ಲರೂ ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದರು.

ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆ, ಪಕ್ಷ ಸಂಘಟನೆ ವೇಳೆ ಕಾಲೆಳೆಯುವ ಕೆಲಸವನ್ನು ಕೆಲವರು ಮಾಡುತ್ತಿರುತ್ತಾರೆ. ಅದನ್ನೆಲ್ಲಾ ಬಿಟ್ಟು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಬೇಕು ಎಂದರು.

ಆಂತರಿಕ ಭಿನ್ನಮತ, ಕಾಲೆಳೆಯುವುದೆಲ್ಲಾ ಪಕ್ಷ ಸಂಘಟನೆ, ಬೆಳವಣಿಗೆಗೆ ಮಾರಕವಾಗಿದೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ, ಪ್ರಾಮಾಣಿಕವಾಗಿ ಶ್ರಮಿಸಬೇಕು. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲಾ ನಾಯಕರೂ ಒಗ್ಗಟ್ಟಿನಿಂದ ಒಟ್ಟಾಗಿ ಶ್ರಮಿಸಬೇಕು. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನೆಲ್ಲಾ ಬದಿಗೊತ್ತು, ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ನೂತನ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಅವರಿಗೆ ಅಭಿನಂದಿಸುತ್ತೇನೆ. ನಿಕಟಪೂರ್ವ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಿಂದಿನ ಚುನಾವಣೆ, ಉಪ ಚುನಾವಣೆ ಸೇರದಂತೆ ಹಲವಾರು ಸನ್ನಿವೇಶ, ಪರಿಸ್ಥಿತಿಯಲ್ಲಿ ಅತ್ಯಂತ ನಿಷ್ಟೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅದೇ ರೀತಿ ಮುಂದೆಯೂ ಎಲ್ಲರೂ ಪಕ್ಷಗ ಗೆಲುವಿಗೆಶ್ರಮಿಸಬೇಕು. ಕಳೆದ ಚುನಾವಣೆಯಲ್ಲಿ ನಮ್ಮೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರ ಪರಿಶ್ರಮದಿಂದ ಉತ್ತಮ ಫಲಿತಾಂಶ ಬಂದಿದೆ. ಮುಂದೆಯೂ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ, ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಡಿ.ಕೆ.ಶಿವಕುಮಾರ ಸಿಎಂ ಆದ ನಂತರ ಪ್ರತಿ ಗ್ರಾಪಂಗೆ ₹1 ಕೋಟಿ, ಜಿಪಂಗೆ ₹20 ಕೋಟಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಕ್ಕೆಂದು ₹100 ಕೋಟಿ ಅನುದಾನ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ನಮ್ಮ ಸರ್ಕಾರದ ಐದೂ ಗ್ಯಾರಂಟಿ ಯೋಜನೆ ಜನರಿಗೆ ತಲುಪುತ್ತಿದ್ದು, ಈ ಸಾಧನೆ ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಮಾಡಬೇಕು. ಸ್ಛಳೀಯ ಸಂಸ್ಥೆಗಳೂ ಸೇರಿದಂತೆ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲೂ ಪಕ್ಷಕ್ಕೆ ಹೆಚ್ಚು ಸ್ಥಾನ ತಂದುಕೊಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಎಸ್.ಎಸ್.ಎಂ. ತಿಳಿಸಿದರು.

- - -

(ಬಾಕ್ಸ್‌-1)

* ಡಿಸೆಂಬರ್‌ನಲ್ಲೇ ತಾಪಂ, ಜಿಪಂ ಚುನಾವಣೆ ಸಾಧ್ಯತೆ, ತಯಾರಾಗಿದಾವಣಗೆರೆ: ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಇದೇ ಡಿಸೆಂಬರ್ ತಿಂಗಳಲ್ಲಿ ಬರುವ ಸಾಧ್ಯತೆ ಇದೆ. ಪ್ರತಿ ಬೂತ್ ಮಟ್ಟದಲ್ಲೂ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸಿ, ಪ್ರತಿ ಕಾರ್ಯಕರ್ತರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕರೆ ನೀಡಿದರು.

ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಜಿ.ಪಂ., ತಾ.ಪಂ. ಚುನಾವಣೆಗಳಿಗೆ ಈವಾಗಿನಿಂದಲೇ ಸಜ್ಜಾಗಬೇಕು ಎಂದರು.

ಯುವ ಘಟಕ ಸದಸ್ಯರಿಗೆ ಹೆಚ್ಚಿನ ಪ್ರೋತ್ಸಾಹ, ಜವಾಬ್ದಾರಿ ನೀಡುವ ಮೂಲಕ ಅದೇ ಯುವಕರಲ್ಲಿ ನಾಯಕತ್ವದ ಗುಣ ಬೆಳೆಸಲು ಒತ್ತು ನೀಡಲಾಗುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಬೇಕು ಎಂದು ಅವರು ತಿಳಿಸಿದರು.

ಆಹಾರ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಮುಂಬರುವ ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಿಗೆ ಈಗಲೇ ಸಿದ್ಧತೆ ಕೈಗೊಳ್ಳಲಾಗಿದ್ದು, ಹಲವಾರು ಆಕಾಂಕ್ಷಿಗಳು ತಮಗೆ ಟಿಕೆಟ್ ಕೊಡುವಂತೆ ಅರ್ಜಿ ಕೊಡುತ್ತಿದ್ದಾರೆ. ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅರ್ಹರಿಗೆ ಅವಕಾಶ ಕಲ್ಪಿಸಲು ಪಕ್ಷವು ತೀರ್ಮಾನಿಸಿದೆ ಎಂದರು.

ಈಚೆಗೆ ನಡೆದ ಮತ ಕಳವು ಕುರಿತಂತೆ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಂಪೂರ್ಣ ಮಾಹಿತಿ ಇರಬೇಕು. ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಮತ ಕಳುವಿನ ಅಂಕಿ ಅಂಶಗಳ ಸಮಗ್ರ ಮಾಹಿತಿ ಪಡೆದು, ಕೇವಲ ಫೋಟೋ ಶೂಟ್ ಅಥವಾ ರ್ಯಾಲಿಗೆ ಸೀಮಿತವಾಗದೆ ಬೂತ್ ಮಟ್ಟದಲ್ಲಿ ಗಟ್ಟಿ ಹೋರಾಟ ನಡೆಸುವ ಮೂಲಕ ಚುನಾವಣೆ ವೇಳೆ ಮತದಾರರಿಗೆ ಮನಮುಟ್ಟುವಂತೆ ತಿಳಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ಹೇಳಿದರು.

ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ ಮುಂತಾದ ಜನಪರ ಕಾರ್ಯಕ್ರಮ, ಕರ್ನಾಟಕ ಮಾದರಿ ಇಡೀ ದೇಶದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಗ್ಯಾರಂಟಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲು ಕಾರ್ಯಕರ್ತರು ಕ್ಷೇತ್ರ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿ, ಪಕ್ಷದ ಸಿದ್ಧಾಂತಗಳು ಮತ್ತು ಗಾಂಧೀಜಿ ವಿಚಾರಧಾರೆ ಜನರಿಗೆ ತಲುಪಿಸುವ ಮೂಲಕ ವಿಪಕ್ಷಗಳ ಟೀಕೆಗಳಿಗೆ ತಕ್ಕ ಉತ್ತರ ನೀಡಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ತಿಳಿಸಿದರು.

- - -

(ಬಾಕ್ಸ್‌-2)

ಕಾಂಗ್ರೆಸ್ ಅನ್ನ ತಿಂದಿರ್ತೀವಿ, ಪಕ್ಷದ ಕೆಲಸ ಮಾಡ್ಬೇಕು: ಎಸ್‌ಎಸ್‌ಎಂ- ಉಪ ಚುನಾವಣೆಯಲ್ಲಿ ಕೆಲವ್ರು ನಾನಾ ಕೆಲಸ ಮಾಡಿದ್ರು: ಜಮೀರ್, ಜಬ್ಬಾರ್‌ ಹೆಸರೇಳದೇ ವಾಗ್ದಾಳಿ- - - ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆ ಹಲವರು ಒಳ್ಳೆಯ ಕೆಲಸ ಮಾಡಿದ್ದರು. ಮತ್ತೆ ಕೆಲವರು ನಾನಾ ಕೆಲಸ ಮಾಡಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ವಪಕ್ಷದ ಸಚಿವ ಜಮೀರ್ ಅಹಮ್ಮದ್, ಎಂಎಲ್‌ಸಿ ಅಬ್ದುಲ್ ಜಬ್ಬಾರ್ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಬುಧವಾರ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅನ್ನ ತಿಂದಿರುತ್ತೇವೆ. ಕಾಂಗ್ರೆಸ್ ಕೆಲಸವನ್ನು ಮಾಡಬೇಕು. ನಮ್ಮವರೇ ನಮಗೆ ಹಿಂದಿನಿಂದ ಚಾಕು ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಳೆದ ಉಪ ಚುನಾವಣೆ ವೇಳೆ ಇಬ್ರಾಹಿಂ ಖಲೀಲುಲ್ಲಾ ಒಳ್ಳೆಯ ಕೆಲಸ ಮಾಡಿದ್ದರು. ಬಡವರ ಕೆಲಸ ಆಗಲು ಕಾಂಗ್ರೆಸ್ ಪಕ್ಷಬೇಕು. ಎಲ್ಲರೂ ಒಗ್ಗಟ್ಟಾಗಿದ್ದರೆ ಭಿನ್ನಾಭಿಪ್ರಾಯ ಏಕೆ ಬರುತ್ತದೆ ಎಂದು ಎಸ್‌ಎಸ್ಎಂ, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕೆಂದು ಭಾಷಣದಲ್ಲಿ ಹೇಳಿದ್ದ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಹೇಳಿಕೆಗೆ ಪ್ರತಿಕ್ರಿಯಿಸಿದರು. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಇಬ್ರಾಹಿಂ ಖಲೀಲುಲ್ಲಾಗೆ ಸಹಕಾರ ನೀಡಬೇಕು. ಯಾರೂ ಪಕ್ಷದ್ರೋಹ ಮಾಡಬಾರದು. ಜಿಲ್ಲೆಯ ಜನರಿಗೆ ಎಲ್ಲವೂ ಗೊತ್ತಿದೆ. ಹಿಂದಿನ ಚುನಾವಣೆಯಲ್ಲಿ ಏನೇನು ಆಗಿದೆಯೆಂಬುದು. ಇಂದಿನಿಂದ ಎಲ್ಲವನ್ನೂ ಮರೆತು, ಒಗ್ಗಟ್ಟಾಗಿ ಎಲ್ಲರೂ ಹೋಗೋಣ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳುವ ಮೂಲಕ ಎಲ್ಲರಿಗೂ ಒಗ್ಗಟ್ಟು ಮತ್ತು ಸಂಘಟನೆಯ ಸಂದೇಶ ನೀಡಿದರು.- - -

- - -

(-ಫೋಟೋ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌