- ಕೇಂದ್ರವೇ ಸಪ್ಲೈ ಮಾಡಿ, ಕೇಂದ್ರವೇ ಸರ್ಟಿಫಿಕೇಟ್ ಕೊಡೋದು ಯಾವ ನ್ಯಾಯ ಎಂದು ಪ್ರಶ್ನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ ಸರ್ಕಾರ ಮಾನ್ಯತೆ ನೀಡಿರುವ ಥರ್ಡ್ ಪಾರ್ಟಿ ಲ್ಯಾಬ್‌ನಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಬಗ್ಗೆ ಪರೀಕ್ಷೆ ಮಾಡಿಸಿದ್ದು, ಸ್ವತಂತ್ರ ಮೂರನೇ ವ್ಯಕ್ತಿಯಿಂದ ಪರೀಕ್ಷೆ ಮಾಡಿಸಿದಾಗಲೇ ನೈಜ ಸ್ಥಿತಿಯೂ ಹೊರಬರುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಥೆನಾಲ್ ಪರೀಕ್ಷೆಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿ ಮಾಡಿಸಿಲ್ಲ. ಕೇಂದ್ರ ಸರ್ಕಾರ ಮಾನ್ಯತೆ ನೀಡಿದ ಲ್ಯಾಬ್‌ನಲ್ಲೇ ಮಾಡಿಸಿದ್ದು, ಕೇಂದ್ರದವರು ಪೂರೈಸುವ ಆಯಿಲ್ ಕಂಪನಿಯವರೆ ಪೆಟ್ರೋಲ್ ಪರೀಕ್ಷೆ ಮಾಡಿಸಿದ್ದಾರೆ ಎಂದರು.
ಇಂಥ ಪೆಟ್ರೋಲ್ ಬಳಸಿದ ಜನಸಾಮಾನ್ಯರ ವಾಹನಗಳು ಹಾಳಾದರೆ ಅದರ ನಷ್ಟ ತುಂಬಿ ಕೊಡುವವರು ಯಾರು? ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆ ಎತ್ತಿದ್ದೇನೆ. ಸರ್ಕಾರದಿಂದ ಜನರಿಗೆ ಏನಾದರೂ ಒಳ್ಳೆಯದು ಮಾಡಬೇಕು ಎಂದುಕೊಂಡಿದ್ದೇವೆ. ನಮ್ಮನ್ನೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೂರ್ಖರು ಅಂತಾ ಹೇಳಿದ್ದಾರೆ. ಈ ಹಿಂದೆ ಎಥೆನಾಲ್ ಶೇ.30ರಷ್ಟು ಮಿಶ್ರಣ ಆಗಬೇಕೆಂಬ ಚಿಂತನೆ ಇದೆಯೆಂದು ಸ್ವತಃ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಪ್ಪಿಕೊಂಡಿದ್ದರು ಎಂದು ಅವರು ತಿಳಿಸಿದರು.
ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ದಾಖಲೆ ಸಮೇತ ಪ್ರಶ್ನಿಸುತ್ತೇನೆ. ಕೇಂದ್ರದ ಅಸಮರ್ಪಕ ಇಂಧನ ನೀತಿ ಹಾಗೂ ತೈಲ ಸರಬರಾಜುದಾರರ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣದಿಂದಾಗಿ ರಾಜ್ಯದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವ ರಿಜ್ವಾನ್ ಬೇಸರ ವ್ಯಕ್ತಪಡಿಸಿದರು.
(ಬಾಕ್ಸ್)
- ನಾವೇ ಅದನ್ನು ತಡೆ ಹಿಡಿದಿದ್ದೇವೆ: ರಿಜ್ವಾನ್ ಅರ್ಷದ್ ದಾವಣಗೆರೆ: ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಮಾಡುತ್ತಿರುವ ಪಟ್ಟಿ ಕೇಂದ್ರ ಸರ್ಕಾರದಿಂದ ಬಂದಿದ್ದು, ಬಿಪಿಎಲ್ ಕಾರ್ಡ್ ರದ್ದತಿಯು ಕೇಂದ್ರ ನೀಡಿದ ಪಟ್ಟಿಯಂತೆಯೇ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
- - -
ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ, ಕೇಂದ್ರ ಸ್ಪಂದಿಸುತ್ತಿಲ್ಲ. ರಾಜ್ಯದ ರೈತರಿಗೆ ಏನೇ ಪರಿಹಾರ ಕೊಡಬೇಕಿದ್ದರೂ ರಾಜ್ಯ ಸರ್ಕಾರವೇ ನೀಡುತ್ತಿದೆ. ಕೇಂದ್ರ ಸರ್ಕಾರವಂತೂ ಈವರೆಗೆ ಏನನ್ನೂ ಕೊಟ್ಟಿಲ್ಲ. ಅಗತ್ಯ ವಸ್ತುಗಳ ಬೆಲೆ ದೇಶಾದ್ಯಂತ ಏರಿಕೆಯಾಗಿವೆ. ಬಿಜೆಪಿ ನಾಯಕರು ಮೊದಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ. ಇಲ್ಲವಾದರೆ ನಾವೇ ಒಗ್ಗಟ್ಟಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ.
- ರಿಜ್ವಾನ್ ಅರ್ಷದ್, ಆಹಾರ ಸಚಿವ- - -