ಅಭದ್ರತೆ ಹುಟ್ಟಿಸುವ ಶಕ್ತಿಗಳನ್ನು ಹೊಡೆದೋಡಿಸಲು ಒಂದಾಗೋಣ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Nov 23, 2025, 02:30 AM IST
22ಎಚ್‌ವಿಆರ್4- | Kannada Prabha

ಸಾರಾಂಶ

ನಮ್ಮನ್ನು ವಿಭಜಿಸಿ ತುಂಡು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ದೇಶ ಉಳಿದರೆ ನಾವು ಉಳಿಯುತ್ತೇವೆ. ಅಭದ್ರತೆ ಹುಟ್ಟಿಸುವ ಶಕ್ತಿಗಳನ್ನು ಹೊಡೆದೋಡಿಸಲು ನಾವೆಲ್ಲ ಒಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾನಗಲ್ಲ: ನಮ್ಮನ್ನು ವಿಭಜಿಸಿ ತುಂಡು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ದೇಶ ಉಳಿದರೆ ನಾವು ಉಳಿಯುತ್ತೇವೆ. ಅಭದ್ರತೆ ಹುಟ್ಟಿಸುವ ಶಕ್ತಿಗಳನ್ನು ಹೊಡೆದೋಡಿಸಲು ನಾವೆಲ್ಲ ಒಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಹಾವಣಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾವಣಗಿ ಗ್ರಾಮದ ಚರಿತ್ರೆಯಲ್ಲಿ ಇಂದು ಬಹಳ ಮಹತ್ವದ ದಿನ. ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟ ಮಾಡಿರುವ ವೀರರಾಣಿ ಕಿತ್ತೂರು ಚೆನ್ನಮ್ಮನ ಪ್ರತಿಮೆ ಅನಾವರಣ ಮಾಡಿರುವ ದಿನ. ಬಹಳಷ್ಟು ಜನರು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಹೇಳುತ್ತಾರೆ. ಆದರೆ, 1824ರಲ್ಲಿಯೇ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷ್ ಅಧಿಕಾರಿ ಥ್ಯಾಕರೆಯ ರುಂಡವನ್ನು ಹೊಡೆದುರುಳಿಸಿದ್ದಳು. ಅದು ಆಗಿ ನಲವತ್ತು ವರ್ಷದ ನಂತರ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಳು ಎಂದು ಹೇಳಿದರು.ವೀರರಾಣಿ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಅವರಿಗೆ ಎಷ್ಟೇ ಕಷ್ಟ ಬಂದರೂ ಈ ದೇಶದ ಮೇಲಿನ ಭಕ್ತಿ ಕಡಿಮೆಯಾಗಲಿಲ್ಲ. ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಖಡ್ಗ ಹಿಡಿದು ಹೋರಾಟ ಮಾಡಿದಳು. ಎರಡನೇ ಯುದ್ಧದಲ್ಲಿ ಚೆನ್ನಮ್ಮಳನ್ನು ಮೋಸದಿಂದ ಸೋಲಿಸಿ ಅವಳನ್ನು ಬೈಲಹೊಂಗಲ ಜೈಲಿನಲ್ಲಿ ಬಂಧಿಸಿ ಅವಳ ನೈತಿಕ ಸ್ಥೆರ್ಯ ಕಳೆಯುವ ಕೆಲಸ ಮಾಡಿದ್ದರು ಎಂದರು.

ಈ ಸಂದರ್ಭದಲ್ಲಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಮಹಾಸ್ವಾಮಿ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಹಲವರು ಇದ್ದರು. ಜ್ಞಾನ ಇದ್ದವರು ಜಗತ್ತು ಆಳುತ್ತಾರೆ: ಈ ದೇಶಕ್ಕೆ ಚರಿತ್ರೆ ಇದೆ. ಚಾರಿತ್ರ್ಯ ಬೇಕಾಗಿದೆ. ಹಲವರು ದೇಶಕ್ಕಾಗಿ ಸರ್ವಸ್ವ ತ್ಯಾಗ ಮಾಡಿದ್ದಾರೆ. ಅವರ ಜೀವನ ತಿಳಿದುಕೊಂಡು ನಮ್ಮ ಚಾರಿತ್ರ್ಯ ಕಟ್ಟಿಕೊಳ್ಳಬೇಕಿದೆ. ಇವತ್ತು ದೇಶ ಸದೃಢವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಅಭದ್ರತೆ ಹುಟ್ಟಿಸುವ ಕೆಲಸ ಆಗುತ್ತಿದೆ. ಅಭದ್ರತೆ ಹುಟ್ಟಿಸುವ ಶಕ್ತಿಗಳನ್ನು ಹೊಡೆದೋಡಿಸಲು ನಾವೆಲ್ಲ ಒಂದಾಗಬೇಕು. ನಾವೆಲ್ಲ ಭಾರತೀಯರು, ನಮ್ಮ ಸಂಕೇತ ಹಿಂದುತ್ವ, ನಾವೆಲ್ಲ ಹನುಮಪ್ಪ, ಶಿವ, ಗಣೇಶನನ್ನು ಪೂಜಿಸುತ್ತೇವೆ. ದೇವರಲ್ಲಿ ಬೇಧವಿಲ್ಲ. ನಮ್ಮನ್ನು ವಿಭಜಿಸಿ ತುಂಡು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ದೇಶ ಉಳಿದರೆ ನಾವು ಉಳಿಯುತ್ತೇವೆ. ನಾವೆಲ್ಲಾ ಒಂದಾಗಿದ್ದೇವೆ ಎಂದರೆ ನಮ್ಮ ಬಳಿ ಯಾರೂ ಬರುವುದಿಲ್ಲ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಒಂದು ಕಾಲದಲ್ಲಿ ಯಾರ ಬಳಿ ಭೂಮಿ ಇತ್ತು ಅವರು ಜಗತ್ತು ಆಳಿದರು. ಮತ್ತೆ ದುಡ್ಡಿದ್ದವರು ಜಗತ್ತು ಆಳಿದರು. ಈಗ ಜ್ಞಾನ ಇದ್ದವರು ಜಗತ್ತು ಆಳುತ್ತಾರೆ. ಚೆನ್ನಮ್ಮನಿಂದ ನಾವು ದೇಶ ಭಕ್ತಿಯನ್ನು ಕಲಿತಿದ್ದೇವೆ. ನಾವು ಮಾಡುವ ಕೆಲಸ ದೇಶಕ್ಕೆ ಒಳಿತಾಗಬೇಕು. ತನಗಾಗಿ ಪ್ರಾಣಿಯೂ ಬದುಕುತ್ತದೆ ಅಂತ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇತರರಿಗೆ ಬದುಕಿದಾಗ ದೇವರು ಮೆಚ್ಚುತ್ತಾನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

PREV

Recommended Stories

ಸತತ ಪರಿಶ್ರಮ, ಪ್ರಯತ್ನ ಗುರಿ ಮುಟ್ಟಲು ಸಾಧ್ಯ
ಡಿಕೆ ಸಿಎಂ ಆಗಲೆಂದು 1001ಈಡುಗಾಯಿ, ತುಲಾಭಾರ