ವಾಸವಿ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಲಿ

KannadaprabhaNewsNetwork | Published : Sep 27, 2024 1:17 AM

ಸಾರಾಂಶ

ಆರ್ಯವೈಶ್ಯ ಕುಲದೇವತೆ ಶ್ರೀವಾಸವಿ ಕನ್ಯಕಾಪರಮೇಶ್ವರಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರ್ಯ ವೈಶ್ಯ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ಆರ್ಯವೈಶ್ಯ ಸಂಘದಿಂದ ಸಿಎಂ ಸಿದ್ದರಾಮಯ್ಯಗೆ ಮನವಿ । ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿ, ಆಚರಣೆ ತರಬೇಕು

ಕನ್ನಡಪ್ರಭ ವಾರ್ತೆ ಕೊಪ್ಪಳ

ಆರ್ಯವೈಶ್ಯ ಕುಲದೇವತೆ ಶ್ರೀವಾಸವಿ ಕನ್ಯಕಾಪರಮೇಶ್ವರಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಒತ್ತಾಯಿಸಿ ತಾಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರ್ಯ ವೈಶ್ಯ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಇತ್ತೀಚೆಗೆ ಮನವಿ ಸಲ್ಲಿಸಿದರು.

ಶ್ರೀವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಪ್ರತಿವರ್ಷ ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ದಶಮಿಯ ದಿನದಂದು ಆಚರಿಸುತ್ತಿದ್ದೇವೆ. ಶ್ರೀವಾಸವಿ ಮಾತೆಯು ಜನ್ಮ ತಾಳಿದ ಉದ್ದೇಶ ಸರ್ವ ಮನುಷ್ಯರು ದೇಹಾಭಿಮಾನವನ್ನು ತ್ಯಾಗ ಮಾಡಿ, ಆತ್ಮಾಭಿಮಾನಿಗಳಾಗಬೇಕು ಎನ್ನುವುದೇ ಆಗಿದೆ. ಅಂದರೆ ಯಾವುದೇ ಮನುಷ್ಯನು ವಸ್ತುಗಳಿಗೆ, ವೈಭೋಗಗಳಿಗೆ ಮತ್ತು ಇಹಲೋಕದ ಭೋಗ, ಲಾಲಸೆಗಳಿಗೆ ವಶನಾಗದೇ ಅಥವಾ ಮನಸೋಲದೆ ಪಾರಮಾರ್ಥಿಕ ಮುಕ್ತಿ ಸಾಧನೆಗಾಗಿ ತನ್ನನ್ನು ತಾನು ಭಗವಂತನಿಗೆ ಸತ್ಯ ಮನಸ್ಸಿನಿಂದ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಮುಖಾಂತರ ಶರಣಾಗಬೇಕು ಎಂದು ತಿಳಿಸುವುದೇ ಶ್ರೀ ವಾಸವಿ ಮಾತೆಯ ಅವತಾರದ ಮುಖ್ಯ ಉದ್ದೇಶವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತಾವುಗಳು ವಿವಿಧ ಸಮಾಜದ ಪ್ರಮುಖ ದೇವರುಗಳ ಮತ್ತು ಮಹನೀಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಆಚರಿಸಿಕೊಂಡು ಬಂದಿದ್ದಿರಿ. ಅದರಂತೆ ಆರ್ಯವೈಶ್ಯ ಸಮಾಜದ ಕುಲದೇವತೆ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿ, ಆಚರಣೆ ತರಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದರು. ಈ ವೇಳೆ ಆರ್ಯವೈಶ್ಯ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಗುಪ್ತಾ, ರಾಜ್ಯ ಉಪಾಧ್ಯಕ್ಷ ಹನುಮಂತಯ್ಯ, ಮುಖಂಡರಾದ ನಾರಾಯಣ ಕುರುಗೋಡ, ರಾಘವೇಂದ್ರ ಕಾರಟಗಿ, ಹನುಮೇಶ ಕುಷ್ಟಗಿ, ಆನಂದ ಶಿರಹಟ್ಟಿ, ಭಾಗ್ಯನಗರದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಸೇರಿದಂತೆ ಅನೇಕರು ಇದ್ದರು.

Share this article