ಹಾನಗಲ್ಲ: ಗ್ರಾಮೀಣ ಭಾಗದಲ್ಲಿ ಜಲ ಸಂಪನ್ಮೂಲಗಳ ಸದ್ಬಳಕೆ ಮತ್ತು ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಮರ್ಪಕವಾಗಿ ತಲುಪಿಸಲು ಕಾಲುವೆಗಳ ಹೂಳೆತ್ತುವುದು ಹಾಗೂ ಪುನಶ್ಚೇತನಗೊಳಿಸುವುದು ಅತ್ಯಗತ್ಯ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಹೇಳಿದರು.
ಬಿಂಗಾಪುರ ಗ್ರಾಮದ ಬಾಳಗಟ್ಟಿಯಿಂದ ಧರ್ಮಾ ನದಿ ವರೆಗಿನ ಕಾಲುವೆ ಪುನಶ್ಚೇತನ ಹಾಗೂ ಗ್ರಾಮದ ಹೆಗ್ಗೇರಿ ಕಾಲುವೆಯ ಪುನಶ್ಚೇತನ ಕಾಮಗಾರಿಗಳನ್ನು ವಿಬಿ ಜಿಆರ್‌ಎಎಂ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಬಿಂಗಾಪುರ ಗ್ರಾಮದ ಧರ್ಮಾ ನದಿ ಮತ್ತು ಹೆಗ್ಗೇರಿ ಕಾಲುವೆಗಳ ಕಾಮಗಾರಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದಲ್ಲದೆ, ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ. ಗ್ರಾಮೀಣ ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಿ ಅವರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿದ್ದು, ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಕಮ್ಮಾರ ವಿವರಿಸಿದರು.
ಪಿಡಿಒ ರಾಮಣ್ಣ ಹನಕನಹಳ್ಳಿ ಮಾತನಾಡಿ, ಮಾರನಬೀಡ ಗ್ರಾಪಂ ವ್ಯಾಪ್ತಿಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ನದಿ ಹಾಗೂ ಕೆರೆ ಕಾಲುವೆಗಳ ಪುನಶ್ಚೇತನ ಕಾಮಗಾರಿ ಪ್ರಾರಂಭವಾಗಿರುವುದು ರೈತರ ಕೃಷಿಗೆ ಸಹಕಾರಿಯಾಗಲಿದೆ. ಪ್ರಸ್ತುತ ೨೧೦ಕ್ಕೂ ಹೆಚ್ಚು ಕೂಲಿಕಾರರು ಈ ಕಾಮಗಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಗ್ರಾಮದ ಕಾರ್ಮಿಕರಿಗೆ ನಿರಂತರ ಕೆಲಸ ನೀಡಲು ಪಂಚಾಯಿತಿ ಬದ್ಧವಾಗಿದೆ. ಈ ಯೋಜನೆಗೆ ತಾಲೂಕು ಆಡಳಿತ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತದೆ ಎಂದರು.ತಾಲೂಕು ಐಇಸಿ ಸಂಯೋಜಕ ಶಾನವಾಜ ಚಿಣಗಿ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ, ಕೃಷ್ಣಪ್ಪ ಪೂಜಾರ, ಶಿವರಾಜ ಈಳಗೇರ, ಸಂಗಮೇಶ ಹಾವೇರಿ, ಮಂಜುನಾಥ ಯಳ್ಳೂರ ಉಪಸ್ಥಿತರಿದ್ದರು.