ನ್ಯಾಯಾಂಗ ಕಾರ್ಯಕ್ರಮ
ಶಿಕ್ಷಣ ಕಲಿತ ಹೆಣ್ಣು ಮಗಳು ಕುಟುಂಬ ಹಾಗೂ ಸಮಾಜಕ್ಕೆ ಗುರುವಾಗುವ ಮೂಲಕ ಕೌಟಂಬಿಕ ವ್ಯವಸ್ಥೆಗೆ ಮಾದರಿಯಾಗಬಲ್ಲಳು. ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಗುತ್ತಿರುವುದು ಸ್ವಾಗತಾರ್ಹ ಎಂದು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಎನ್.ಅಮರನಾಥ್ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ‘ಹೆಣ್ಣೊಂದು ಕಲಿತರೆ ಮನೆಯಲ್ಲಿ ಒಂದು ಶಾಲೆ ತೆರೆದಂತೆ. ಹಂತ ಹಂತವಾಗಿ ಮಹಿಳೆಯರಿಗೆ ನ್ಯಾಯ ಸಿಗಲು ಪ್ರಾರಂಭವಾಗಿದೆ. ಈ ಬೆಳವಣಿಗೆಯಿಂದ ತಮ್ಮ ಹಕ್ಕುಗಳನ್ನು ಪಡೆಯಲು ಸಾದ್ಯವಾಗುತ್ತಿದೆ. ತಾನು ಹುಟ್ಟಿ ಬೆಳೆದ ಮನೆಗೆ ಮಗಳಾಗಿ, ಮದುವೆ ನಂತರ ಗಂಡನ ಮನೆಯಲ್ಲಿ ಸೊಸೆಯಾಗಿ ನಿಜವಾದ ಜವಾಬ್ದಾರಿಯೊಂದಿಗೆ ಕರ್ತವ್ಯ ಅರಿತು ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೀವನ ರೂಪಿಸಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.‘ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಮಹಿಳೆಯರು ಸಾಧನೆ ಮತ್ತು ಯಶಸ್ಸಿನೊಂದಿಗೆ ಗುರುತರ ನೆನಪುಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಹೆಣ್ಣು ಮಕ್ಕಳು ಕೌಟಂಬಿಕ ವ್ಯವಸ್ಥೆಯಲ್ಲಿ ಜ್ಞಾನವಂತೆಯಾಗಿ ಹಿರಿಯ ಕಿರಿಯರೊಂದಿಗೆ ಉತ್ತಮ ಭಾಂದವ್ಯವನ್ನು ಉಳಿಸಿ ಬೆಳೆಸುವಲ್ಲಿ ದೇಶಕ್ಕೆ ಮತ್ತು ಸಮಾಜಕ್ಕೆ ಮಾದರಿ ಹೆಣ್ಣುಮಗಳಾಗುವುದರ ಮೂಲಕ ಬೇರೆಯವರಿಗೂ ಉತ್ತೇಜನಕಾರಿ ಆಗಲು ಸಾದ್ಯವಿದೆ. ಕಳೆದ ಬಾರಿ ನ್ಯಾಯಾಂಗ ಇಲಾಖೆ ಮೂಲಕ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅರಸೀಕೆರೆಗೆ ಪ್ರಥಮ ಸ್ಥಾನ ದೊರೆತಿದೆ. ಈ ಯಶಸ್ಸಿನ ಹಿಂದೆ ಎಲ್ಲ ವಕೀಲರ ಪಾತ್ರವಿದ್ದು, ಮುಂದಿನ ದಿನಗಳಲ್ಲಿ ಇದೇ ರಿತೀಯ ಸಹಕಾರ ಇರಲಿ’ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ನ್ಯಾಯಧೀಶರಾದ ಜಿ.ಅನಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಜಿ ರೂಪರಾಜ್, ಕಾರ್ಯದರ್ಶಿ ಜಿ.ಕೃಷ್ಣಮೂರ್ತಿ, ಹಿರಿಯ ವಕೀಲರಾದ ಕಲ್ಗುಂಡಿ ಹಿರಿಯಣ್ಣ, ವೈ.ಬಿ.ಚಂದ್ರಶೇಖರ್, ಆರ್.ವಿಜಯ ಕುಮಾರ್, ಸಿದ್ದಮಲ್ಲಪ್ಪ, ಪಿ.ನಟರಾಜು ಮಾತನಾಡಿದರು.
ಅರಸೀಕೆರೆ ನಗರದ ನ್ಯಾಯಾಲಯ ಆವರಣದಲ್ಲಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಅನಿತಾ ಉದ್ಘಾಟಿಸಿದರು.