ಮಹಿಳೆಯರು ಕಿರು ಉದ್ಯಮ ಆರಂಭಿಸಿ, ಸ್ವಾವಲಂಬಿಗಳಾಗಲಿ: ಪ್ರಶಾಂತಕುಮಾರ ಮಿಶ್ರಾ

KannadaprabhaNewsNetwork |  
Published : Mar 29, 2025, 12:34 AM IST
ಬಳ್ಳಾರಿಯ ಜಿಪಂ ನಜೀರ್‌ಸಾಬ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಗುಂಪುಗಳಿಗೆ ಜಿಲ್ಲಾಧಿಕಾರಿ ನೆನಪಿನ ಕಾಣಿಕೆ ನೀಡಿದರು. | Kannada Prabha

ಸಾರಾಂಶ

ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಹೇಳಿದರು.

ಬಳ್ಳಾರಿ: ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಕಿರು ಉದ್ಯಮಗಳನ್ನು ಆರಂಭಿಸಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಹೇಳಿದರು.

ಜಿಪಂ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಲಿಂಗತ್ವ ಪರಿವರ್ತನಾ ಅಭಿಯಾನ ಅಂಗವಾಗಿ ನಗರದ ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಮಾತನಾಡಿ, 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯಿತ ಕಾಮಗಾರಿಗಳು ಪ್ರಾರಂಭ ಆಗುತ್ತಿದ್ದು, ಉದ್ಯೋಗ ಚೀಟಿ ಹೊಂದಿದ ಕುಟುಂಬಗಳು ಮತ್ತು ವಿಶೇಷವಾಗಿ ಮಹಿಳೆಯರು ಬೇರೆ ಕಡೆ ಪಟ್ಟಣ, ನಗರ ಪ್ರದೇಶಗಳಿಗೆ ವಲಸೆ ಹೋಗದೆ ನಿಮ್ಮ ಗ್ರಾಮದಲ್ಲೇ ಪ್ರತಿ ಕುಟುಂಬವು 100 ದಿನಗಳ ವರೆಗೆ ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತೊಡಗಿದ್ದಾರೆ. ಸಾಧಿಸುವ ಛಲ ಹೊಂದಬೇಕು. ಯಾವುದೇ ಸಮಯದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಬಳಿಕ ಆಯುಷ್ ಇಲಾಖೆ ವೈದ್ಯರಾದ ಡಾ. ಮುಕ್ಕಣ್ಣ ಅವರು ಮಹಿಳೆಯರ ಆರೋಗ್ಯ, ಶುಚಿತ್ವ ಮತ್ತು ನೈರ್ಮಲ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಚಿಸಿ ಉತ್ತಮ ಮತ್ತು ವಿಶೇಷವಾಗಿ ಕೆಲಸ ನಿರ್ವಹಿಸುತ್ತಿರುವ ವಿವಿಧ ತಾಲೂಕುಗಳಿಗೆ ಮೂರು ಗ್ರಾಪಂ ಮಟ್ಟದ ಒಕ್ಕೂಟಗಳು ಮತ್ತು ಮೂರು ಸ್ವ ಸಹಾಯ ಗುಂಪುಗಳಿಗೆ ಅವರು ನಿರ್ವಹಿಸುತ್ತಿರುವ ವಿವಿಧ ಚಟುವಟಿಕೆ, ಪ್ರಗತಿ ಸಾಧಿಸಿದ ಆಧಾರದ ಮೇರೆಗೆ ಪುರಸ್ಕಾರ, ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಂಡೂರು ತಾಲೂಕಿನ ದರೋಜಿ ಗ್ರಾಮದ ಅಕ್ಕಮಹಾದೇವಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ- ಪ್ರಥಮ ಸ್ಥಾನ, ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಮೆಟ್ರಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ- ದ್ವಿತೀಯ ಸ್ಥಾನ, ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಕೊಟ್ಟೂರೇಶ್ವರ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ- ತೃತೀಯ ಸ್ಥಾನ ಪಡೆಯಿತು.

ಆಯುಷ್ ಇಲಾಖೆಯ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಜಿಪಂ ಮುಖ್ಯ ಲೆಕ್ಕಾಧಿಕಾರಿ ವೈ. ಪರಿಮಳಾ, ಉಪಕಾರ್ಯದರ್ಶಿ ಗಿರಿಜಾ ಶಂಕರ್, ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಯೋಜನಾ ನಿರ್ದೇಶಕ ವಿನೋದ್ ಕುಮಾರ್, ಸಹಾಯಕ ನಿರ್ದೇಶಕ ಬಸವರಾಜ್ ಹಿರೇಮಠ, ಕುರುಗೋಡು ತಾಪಂ ಇಒ ನಿರ್ಮಲಾ, ಸಂಡೂರು ತಾಪಂ ಇಒ ರೇಣುಕಾಚಾರ್ಯ, ಬಿಸಿಯೂಟ ಯೋಜನೆ ಇಒ ಕಸ್ತೂರಿ, ಎನ್‌ಆರ್‌ಎಲ್‌ಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಎಂ. ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ