ಎಲ್ಲ ಗ್ರಾಮಗಳಲ್ಲೂ ಕುಡಿಯುವ ಜಲದ ಹಾಹಾಕಾರ ದೂರ । ಶಾಸಕರ ಮಾರ್ಗದರ್ಶನದಲ್ಲಿ ನಿರಂತರ ಶ್ರಮದ ಫಲ
ಕನ್ನಡಪ್ರಭ ವಾರ್ತೆ ಚಳ್ಳಕೆರೆಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಸುಡುಬಿಸಿಲಿನಲ್ಲೂ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಜಾಗ್ರತೆ ವಹಿಸುವಲ್ಲಿ ಅಧಿಕಾರಿಗಳು ಸಫಲರಾಗಿದ್ಧಾರೆ. ಕ್ಷೇತ್ರದ ಶಾಸಕ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಬೇಸಿಗೆ ಆರಂಭಕ್ಕೂ ಮುನ್ನವೇ ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜನರು ನೀರಿಗಾಗಿ ಹಾಹಾಕಾರ ಪಡದೆ ನೆಮ್ಮೆದಿಯಿಂದ ಇರುವಂತೆ ನೋಡಿಕೊಳ್ಳಲು ನೀಡಿದ ಕಟ್ಟುನಿಟ್ಟಿನ ಆದೇಶ ಪಾಲನೆಯಾಗಿದೆ.
ಕ್ಷೇತ್ರದಲ್ಲಿ ೨೬೨ ಹಳ್ಳಿಗಳು ಬರುತ್ತಿದ್ದು ಪರಶುರಾಮಪುರ, ಕಸಬಾ ಮತ್ತು ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯೂ ಸಹ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ, ಪ್ರಸ್ತುತ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಕಂಡಿಲ್ಲ. ಕಳೆದ ವರ್ಷ ಬಂದ ಉತ್ತಮ ಮಳೆ ವಾಣಿವಿಲಾಸ ಸಾಗರದ ನೀರು ಈ ಭಾಗದಲ್ಲಿ ವೇದಾವತಿ ನದಿ ಮೂಲಕ ಹಾದು ಹೋಗಿದ್ದು ಬಹುತೇಕ ನದಿ ಪಾತ್ರದ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಿದೆ. ಕ್ಷೇತ್ರದ ಚೌಳೂರು, ಪರಶುರಾಮಪುರ, ಬೊಂಬೇರಹಳ್ಳಿ ಚೆಕ್‌ಡ್ಯಾಂಗಳು ಸಹ ತುಂಬಿ ಯಾವ ಭಾಗದಲ್ಲೂ ಕುಡಿಯುವ ನೀರಿನ ಅಭಾವ ತಲೆದೋರಿಲ್ಲ.ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು ೧೭೦ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ, ಈ ಪೈಕಿ ೨೪ ಘಟಕಗಳು ದುಸ್ಥಿತಿಯಲ್ಲಿವೆ. ೧೪೬ ಘಟಕಗಳು ಪ್ರತಿನಿತ್ಯ ಕಾರ್ಯಾಚರಣೆಯಲ್ಲಿದ್ದು, ಗ್ರಾಮೀಣ ಭಾಗದ ಜನರಿಗೆ ದಿನ ೨೪ ಗಂಟೆಗಳ ಕಾಲವೂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಶಾಸಕರ ಮಾರ್ಗದರ್ಶನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೈಗೊಂಡ ನೀರಿನ ಸಮಸ್ಯೆಗಳ ನಿವಾರಣೆಯಿಂದ ಇಂದು ಈ ಭಾಗದಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ವಿಶೇಷವಾಗಿ ಉಪ ವಿಭಾಗದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ ಎಲ್ಲೇ ನೀರಿನ ಕೊರತೆಯಾಗಲಿ ಕೂಡಲೇ ಅಲ್ಲಿ ಕೊಳವೆಬಾವಿ ಕೊರೆಸಿ ನೀರು ನೀಡುವ ಕೆಲಸ ಮಾಡಿದ್ದಾರೆ.
ಸುಮಾರು ೫.೩೯ ಕೋಟಿ ಯೋಜನೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ತುಂಗಾ ಹಿನ್ನೀರು ಯೋಜನೆ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಲಾಗಿದೆ.ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಪ್ರಮುಖ ಹೋಬಳಿ ಸೇರಿ ೨೬೨ ಗ್ರಾಮಗಳಿವೆ, ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವ ಭಾಗದಲ್ಲೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮೀಣ ಭಾಗದ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರಿಂದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಬಂದ ಎಲ್ಲಾ ಮನವಿಗಳಿಗೆ ಸ್ಪಂದಿಸಲಾಗಿದೆ. ಶುದ್ಧಕುಡಿಯುವ ನೀರಿನ ಘಟಕ ರಿಪೇರಿ ಸಂದರ್ಭದಲ್ಲಿ ವಿಳಂಬ ಉಂಟಾಗುತ್ತಿದ್ದು, ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿದೆ.
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುವಂತೆ ಶಾಸಕ ಟಿ.ರಘುಮೂರ್ತಿ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಈ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾದಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಸಮೃದ್ಧ ಕುಡಿಯುವ ನೀರು ಸಿಗಲಿದೆ.ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ತೊಂದರೆಯಾಗಿಲ್ಲ. ಪ್ರತಿಗ್ರಾಮಗಳಲ್ಲೂ ನಾಲ್ಕು ಶುದ್ದ ಕುಡಿಯುವ ನೀರಿನ ಘಟಕವಿದ್ದು, ಎರಡರಿಂದಮೂರು ಘಟಕಗಳು ಚಾಲನೆಯಲ್ಲಿವೆ. ಶಾಸಕರ ಮಾರ್ಗದರ್ಶನದಲ್ಲಿ ಕುಡಿಯುವ ನೀರು ಒದಗಿಸಲು ಎಲ್ಲಾ ರೀತಿಯ ಕ್ರಮಕೈಗೊಂಡಿದೆ.
ಕೆ.ಎಚ್.ದಯಾನಂದಸ್ವಾಮಿ ಸಹಾಯಕ ಕಾರ್ಯಪಾಲಕ ಅಭಿಯಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.