ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ಅವಕಾಶಗಳನ್ನು ಸೃಷ್ಟಿಸಿಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿರಿಸಿದ್ದರೂ, ಅವರನ್ನು ಹತ್ತಿಕ್ಕುವುದು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರಲ್ಲದೆ, ಮಹಿಳೆಯರು ಪ್ರಶ್ನಿಸುವ ಮನೋಭಾವ ಬೆಳಸಿಕೊಂಡಲ್ಲಿ ವೈಚಾರಿಕವಾಗಿ ಮುಂದೆ ಬರುತ್ತಾರೆ ಎಂದು ಹೇಳಿದರು.
ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಸಮಾಜದಿಂದ ಆಗಬೇಕಾಗಿದೆ ಎಂದು ಸಮಾಜದ ವಿಜ್ಞಾನ ನಿಕಾಯದ ಡೀನ್ ಗೌರಿ ಮಾಣಿಕ್ ಮಾನಸ ತಿಳಿಸಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪದಕ, ಪ್ರಮಾಣ ಪತ್ರ ವಿತರಿಸಲಾಯಿತು. ನಂತರದಲ್ಲಿ ಜನಪದ ಸಂಗೀತ, ಹಾಸ್ಯ ಕಾರ್ಯಕ್ರಮ ಜರುಗಿದವು. ಡಾ. ಎಚ್. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.