ಕಾರ್ಮಿಕರು ಕಾಯ್ದೆಗಳನ್ನು ಅರಿಯಲಿ: ನ್ಯಾಯಾಧೀಶ ರಾಜೇಶ್ ಹೊಸಮನೆ

KannadaprabhaNewsNetwork |  
Published : Sep 21, 2024, 02:02 AM IST
ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಬಳ್ಳಾರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಗಳ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಹಲವಾರು ಕಾಯ್ದೆಗಳನ್ನು ಜಾರಿಗೆ ತಂದಿದೆ.

ಬಳ್ಳಾರಿ: ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಗಳ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಹಲವಾರು ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಅರಿವು ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ, ಜಿಲ್ಲಾ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ಇಲಾಖೆಯ ಕಾರ್ಯಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಸಂಬಂಧಿಸಿದ ಕಾರ್ಮಿಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಭಾಗದಲ್ಲಿ ಮಹಿಳೆಯರು ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಮಹಿಳೆಯರು ವಿವಿಧ ಕಾರ್ಮಿಕ ಕಾಯ್ದೆಗಳನ್ನು ಅರಿಯಬೇಕು ಎಂದು ಅವರು ನಿರ್ದೇಶನ ನೀಡಿದರು.

ಸರ್ಕಾರವು ಹಲವಾರು ಯೋಜನೆಗಳನ್ನು ಕಾರ್ಮಿಕರಿಗೆ ಒದಗಿಸಲಾಗುತ್ತಿದ್ದು, ಅರ್ಹ ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಇನ್ನಿತರೆ ಸಾರ್ವಜನಿಕರಿಗೆ ಉಚಿತ ಕಾನೂನು ಸಲಹೆ ಮತ್ತು ನೆರವು ನೀಡಲಾಗುತ್ತಿದ್ದು, ಸಂಕಷ್ಟದ ಸಮಯದಲ್ಲಿ ನೆರವು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಸಮಾಜದಲ್ಲಿ ಧೈರ್ಯ ಮತ್ತು ಗೌರವದಿಂದ ಜೀವನ ನಡೆಸುವ ಅವಕಾಶ ಸಂವಿಧಾನವು ಕಲ್ಪಿಸಿದೆ. ನಿಮ್ಮ ನೆರೆಹೊರೆಯವರಿಗೂ ಕಾನೂನು ಸೇವೆಗಳ ಕುರಿತು ಮಾಹಿತಿ ತಿಳಿಸಬೇಕು ಎಂದರು.

ಇಎಸ್‌ಐಸಿಯ ಶಾಖಾ ವ್ಯವಸ್ಥಾಪಕ ಶಿವಕುಮಾರ್ ಅವರು ನೌಕರರ ರಾಜ್ಯ ವಿಮಾ ಕಾಯ್ದೆ ಮತ್ತು ನಿಯಮಗಳು ಹಾಗೂ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಟ್ಟರು.

ಬಳ್ಳಾರಿ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಜಿ.ಖೈನೂರು ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಯ ಶಾಖಾ ವ್ಯವಸ್ಥಾಪಕ ಶಿವಕುಮಾರ್, ಕಾರ್ಮಿಕ ನಿರೀಕ್ಷಕರಾದ 1ನೇ ವೃತ್ತದ ರಮೇಶ್ ಜಿ., 2ನೇ ವೃತ್ತದ ಪರಶುರಾಮ್ ಎನ್.ಎಸ್., ಸಂಡೂರು ವೃತ್ತದ ಕಾರ್ಮಿಕ ನಿರೀಕ್ಷಕ ಮಂಜುನಾಥ್ ಟಿ., ಸಿರುಗುಪ್ಪ ವೃತ್ತ ಕಾರ್ಮಿಕ ನಿರೀಕ್ಷಕ ತಿರುಮಲೇಶ ಸೇರಿದಂತೆ ಮಹಿಳಾ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''