ಯುದ್ಧ ಸನ್ನಿವೇಶಕ್ಕೆ ಬರಹಗಾರರು ಸ್ಪಂದಿಸಲಿ: ಬಸವರಾಜ

KannadaprabhaNewsNetwork |  
Published : May 11, 2025, 01:15 AM IST
ಬಳ್ಳಾರಿಯ ಸಂಗಂ ಟ್ರಸ್ಟ್ ವತಿಯಿಂದ ಜ್ಞಾನಾಮೃತ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ ಕನ್ನಡ ಸಾಹಿತ್ಯದ ಸ್ವರೂಪ ಹಾಗೂ ಸಂವೇದನೆ -ಮಾತುಕತೆ ‘ ಸಮಾರಂಭಕ್ಕೆ ಹಿರಿಯ ಲೇಖಕ ಜಿ. ಪಿ.ಬಸವರಾಜ ಅವರು ಚಾಲನೆ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಯುದ್ಧದ ಸನ್ನಿವೇಶಕ್ಕೆ ಬರಹಗಾರರಾದವರು ತೀವ್ರವಾಗಿ ಸ್ಪಂದಿಸಬೇಕು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಯುದ್ಧದ ಸನ್ನಿವೇಶಕ್ಕೆ ಬರಹಗಾರರಾದವರು ತೀವ್ರವಾಗಿ ಸ್ಪಂದಿಸಬೇಕು ಎಂದು ಹಿರಿಯ ಲೇಖಕ ಜಿ. ಪಿ.ಬಸವರಾಜ ಅಭಿಪ್ರಾಯಪಟ್ಟರು.

ಬಳ್ಳಾರಿಯ ಸಂಗಂ ಟ್ರಸ್ಟ್ ವತಿಯಿಂದ ಜ್ಞಾನಾಮೃತ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯದ ಸ್ವರೂಪ ಹಾಗೂ ಸಂವೇದನೆ -ಮಾತುಕತೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುದ್ಧದ ಕರಿ ನೆರಳು ನಮ್ಮ ಮೇಲಿದೆ. ಪಾಕಿಸ್ತಾನದ ಗಡಿ ರಾಜ್ಯಗಳಲ್ಲಿ ಜನ ಭಯಭೀತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾರು ಕೂಡ ನೆಮ್ಮದಿಯಿಂದ ಇರಬಾರದು. ಯುದ್ಧ ಸಂದರ್ಭಗಳಲ್ಲಿ ಬರಹಗಾರರಿಗೆ ತಮ್ಮದೇ ಆದ ಜವಾಬ್ದಾರಿಗಳಿವೆ. ಯುದ್ಧದ ಸನ್ನಿವೇಶಕ್ಕೆ ಸ್ಪಂದಿಸಬೇಕು. ದೇಶದ ಭದ್ರತೆ ವಿಚಾರ ಬಂದಾಗ ಎಲ್ಲರೂ ಒಗ್ಗೂಡಬೇಕು ಎಂದರು.

ನಮ್ಮ ಕಣ್ಣೆದುರಿಗೆ ಎರಡು ಭಾರತಗಳಿವೆ. ಮೊದಲನೇ ಭಾರತದಲ್ಲಿ ಅಂತರ್ಜಾಲದ ಎಲ್ಲ ಸೌಕರ್ಯಗಳಿವೆ. ಎರಡನೇ ಭಾರತದಲ್ಲಿ ಬಡತನ, ಅನಕ್ಷರತೆ, ಅಸಹಾಯಕತೆಗಳಿಗೆ ಒಳಗಾದ ಜನಸಮುದಾಯವಿದೆ. ಇಲ್ಲಿ ಗುರುತು ಕೂಡ ಸಿಗದ ಅನೇಕ ಸಮುದಾಯಗಳಿವೆ. ಇವರಿಗೆ ಊರು, ಮನೆ, ಉದ್ಯೋಗ, ಶಿಕ್ಷಣವಿಲ್ಲ. ಇಂತಹ ಭಾರತಕ್ಕೆ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ ಕೊಡಬೇಕೆಂದು ಅಂಬೇಡ್ಕರ್ ಆಲೋಚಿಸಿದ್ದರು ಎಂದು ವಿಶ್ಲೇಷಿಸಿದರು.

ಬರಹಗಾರರು ಪ್ರಧಾನವಾಗಿ ಅಸಹಾಯಕತೆಯಿಂದ ನರಳುತ್ತಿರುವ ಸಮುದಾಯಗಳ ಕಡೆ ಹೃದಯ ಮತ್ತು ತೆರೆದ ಕಣ್ಣಿನಿಂದ ನೋಡುವಂತಾಗಬೇಕು. ಆಗ ದೇಶದ ಜನ ಸಮುದಾಯಗಳ ತಲ್ಲಣಗಳು ಅರ್ಥವಾಗಲು ಸಾಧ್ಯ. ನಮ್ಮ ಬರಹಕ್ಕೈ ಶಕ್ತಿ ಬರಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಗಂ ಟ್ರಸ್ಟ್‌ನ ಗೌರವಾಧ್ಯಕ್ಷ ಡಾ. ಅರವಿಂದ ಪಟೇಲ್ ಮಾತನಾಡಿ, ನಾಡಿನ ಮೂಲೆ ಮೂಲೆಯಿಂದ ಬಂದ ಬರಹಗಾರರು ಇಲ್ಲಿ ತಮ್ಮ ಅನುಭವ, ಸಂವೇದನೆಗಳನ್ನು ಹಂಚಿಕೊಳ್ಳುವುದರ ಜೊತೆಗೆ ಪ್ರೀತಿಯಿಂದ ಬೆರೆಯುತ್ತಿದ್ದಾರೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಕವಿ ಆರಿಫ್ ರಾಜ, ಕನ್ನಡದ ಎಷ್ಟೋ ಪ್ರಮುಖ ಕೃತಿಗಳು ಈ ಹೊತ್ತಿಗೂ ಬೇರೆ ಭಾಷೆಗೆ ದಾಟಿಲ್ಲ. ನಮ್ಮ ಸಂವೇದನೆ, ನಿರೂಪಣೆಗಳ ಹಿಂದೆ ಯಾರಾದರೂ ಇದ್ದಾರಾ?. ನಮ್ಮ ಅನನ್ಯತೆಯನ್ನು ದಾಖಲಿಸಲು ಹಿಂಜರಿಕೆ ಕಾಡುತ್ತಿದೆ. ಈ ತೆರನಾದ ಅನೇಕ ಪ್ರಶ್ನೆಗಳು ಇಂದು ಎದುರಾಗುತ್ತಿವೆ. ಈ ವೇದಿಕೆ ಕನ್ನಡದ ಬರಹಗಾರರಿಗೆ ಅಷ್ಟೇ ಸೀಮಿತವಾಗದೆ, ದೇಶದ ವಿವಿಧ ಭಾಗದ ಲೇಖಕರನ್ನು ಒಂದೆಡೆ ಸೇರಿಸಿ ಮುಕ್ತವಾಗಿ, ಆರೋಗ್ಯಕರವಾಗಿ ಚರ್ಚಿಸಲು ಸಹಕಾರಿಯಾಗಲಿದೆ ಎಂದರು.

ಜ್ಞಾನಾಮೃತ ಕಾಲೇಜಿನ ಪ್ರಾಂಶುಪಾಲ ಯಶವಂತ ಶೆಟ್ಟಿ, ಸಂಗಂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳು, ಜಂಟಿ ಕಾರ್ಯದರ್ಶಿ ಪುಷ್ಪಲತ ಉಪಸ್ಥಿತರಿದ್ದರು.

ಲೇಖಕರಾದ ದಸ್ತಗೀರಸಾಬ್ ದಿನ್ನಿ, ವೀರೇಂದ್ರ ರಾವಿಹಾಳ್, ನಾಗರಾಜ ಬಸರಕೋಡು, ಎಂ.ಬಸವರಾಜ್, ಲತಾ ಗುತ್ತಿ, ಟಿ.ಎಸ್. ಗೊರವರ, ಚೀಮನಹಳ್ಳಿ ರಮೇಶ್ ಬಾಬು, ತುಂಬಾಡಿ ರಾಮಯ್ಯ, ಪದ್ಮನಾಭ ಭಟ್, ರಾಜೇಂದ್ರ ಪ್ರಸಾದ್, ಸುಮಿತ್ ಮೇತ್ರಿ, ಶೃತಿ ಬಿ. ಆರ್., ಫಾತೀಮಾ ರಲಿಯಾ, ಚೈತ್ರಾ ಶಿವಯೋಗಿ ಮಠ, ಎಡೆಯೂರು ಪಲ್ಲವಿ, ಗುಂಡುರಾವ್ ದೇಸಾಯಿ, ಪ್ರವೀಣ್ ರೆಡ್ಡಿ ಗುಂಜಳ್ಳಿ ಮುಂತಾದವರಿದ್ದರು.

ಸಾಹಿತ್ಯ ಪುರಸ್ಕಾರ ಸಮಾರಂಭ:

ಮೇ 11ರಂದು ಸಂಜೆ ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭ ಜರುಗಲಿದ್ದು, ಉದ್ಯಮಿ ಎಂ.ಜಿ.ಗೌಡ ಉದ್ಘಾಟಿಸುವರು. ಸಂಗಂ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಜಿ.ಪಿ. ಬಸವರಾಜ ಪ್ರಶಸ್ತಿ ಪ್ರದಾನ ಮಾಡುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಜಾಗೊಳಿಸಿದ್ದ ಗುತ್ತಿಗೆ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವ ಕುರಿತು ಒಪ್ಪಂದ
ಸರ್ಕಾರಿ ಭೂಮಿ ಒತ್ತುವರಿ ಶೀಘ್ರದಲ್ಲೇ ತೆರವು: ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ