ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಹೊಳೆಹೊನ್ನೂರು / ಭದ್ರಾವತಿ/ ಆನಂದಪುರ
ಮಾನಸಿಕ, ದೈಹಿಕ, ಬೌದ್ಧಿಕ, ಸಾಮಾಜಿಕ ವಿಕಾಸವಾಗಬೇಕಾದರೆ ಯೋಗವನ್ನು ಪ್ರತಿನಿತ್ಯ ಜೀವನದ ಭಾಗವಾಗಿ ಮಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಯೋಗ ಶಿಕ್ಷಣ ಸಮಿತಿ ಸದಸ್ಯೆ ಅಂಬಿಕಾ ನಾಗಭೂಷಣ್ ಹೇಳಿದರು.ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ 10 ನೇ ವಿಶ್ವಯೋಗ ದಿನ ಮತ್ತು ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಸತ್ಯ ಅಹಿಂಸೆ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯಗಳನ್ನು ನಮ್ಮಜೀವನದಲ್ಲಿ ಪರಿಪಾಲಿಸಬೇಕು. ಇಂದಿನ ಜಗತ್ತಿನಲ್ಲಿ ವ್ಯಕ್ತಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಅತಿ ಅವಶ್ಯಕ. ಅದಕ್ಕಾಗಿ ಕ್ರೀಯಾಶೀಲರಾಗಿ, ಸದೃಢ ಆರೋಗ್ಯ ಹೊಂದಲು ಅಮೂಲ್ಯ ಸಮಯವನ್ನು ಮೀಸಲಿಡಬೇಕು. ಪ್ರಾಣಾಯಾಮ ಮಾಡಿ ಉಸಿರಿನ ನಿಯಂತ್ರಣದಿಂದ ದೇಹಕ್ಕೆ ಬೇಕಾದ ಎಲ್ಲ ಅಗತ್ಯತೆಗಳನ್ನು ಪಡೆಯಬೇಕು. ಆಗ ಪ್ರತಿಯೊಬ್ಬರೂ ತಮ್ಮ ಆಂತರಿಕ ಸಾಮರ್ಥ್ಯವನ್ನು ಯೋಗದಿಂದ ಪಡೆಯಬಹುದು ಎಂದರು.ಜ್ಞಾನದೀಪ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ. ಹೆಗಡೆ, ವಿಶ್ವಕ್ಕೆ ಯೋಗದ ಮಹತ್ವ ಸಾರಿದ ದೇಶ ಭಾರತ. ನಮ್ಮ ಮಕ್ಕಳಿಗೆ ಸಂಗೀತ, ಯೋಗ ಅತಿ ಮುಖ್ಯ. ನಮ್ಮ ಶಾಲೆ ಯೋಗ ಮತ್ತು ಸಂಗೀತಕ್ಕೆ ಮಹತ್ವ ನೀಡಿದೆ ಎಂದರು. ಯೋಗದ ಮಹತ್ವವನ್ನು ಶಾಲೆಯ ಶಿಕ್ಷಕ ವಾಸುದೇವ ಘಾಟೆ ಮನವರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಂಗೀತದ ವಾದ್ಯಗಳ ನುಡಿಸುವಿಕೆ, ಕರ್ನಾಟಕ ಸಂಗೀತದಲ್ಲಿ ವಿವಿಧ ಹಾಡುಗಳನ್ನು ಹಾಡಿದರು. ಸಂಗೀತ ಶಿಕ್ಷಕಿ ವಿದ್ಯಾರಾಗ ಸಂಯೋಜನೆ ಮತ್ತು ಉಮೇಶಾಚಾರ್ಯ ಅವರಿಂದ ವಾದ್ಯ ಸಂಯೋಜನೆ ಅತ್ಯುತ್ತಮವಾಗಿತ್ತು.
ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನೀಲಕಂಠಮೂರ್ತಿ ಶಾಲೆಯ ಹಿರಿಯ ಉಪಪ್ರಾಂಶುಪಾಲ ಡಾ.ರೆಗಿ ಜೋಸೇಫ್, ಉಪಪ್ರಾಂಶುಪಾಲೆ ವಾಣಿಕೃಷ್ಣಪ್ರಸಾದ್ ಉಪಸ್ಥಿತರಿದ್ದರು.ಆರೋಗ್ಯ ಸುಧಾರಣೆಗೆ ಯೋಗವೇ ಮಾರ್ಗ: ಕುಲಸಚಿವ ಡಾ.ಶಶಿಧರ್ ಆನಂದಪುರ: ಯೋಗಾಭ್ಯಾಸ ನಮ್ಮ ದೈಹಿಕ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಒಂದು ಉತ್ತಮ ಮಾರ್ಗವಾಗಿದೆ ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಶಶಿಧರ್ ಹೇಳಿದರು.ಇಲ್ಲಿನ ಸಮೀಪದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿ, ಮನುಷ್ಯ ಆಧುನಿಕ ಜಗತ್ತಿನಲ್ಲಿ ದಿನನಿತ್ಯದ ಜೀವನವನ್ನು ಯಾಂತ್ರಿಕವಾಗಿ ಕಳೆಯುತ್ತಿದ್ದು ಮಾನಸಿಕ ನೆಮ್ಮದಿ ಪಡೆದುಕೊಳ್ಳಲು ಅನ್ಯ ಮಾರ್ಗಗಳಿಗೆ ಒಳಗಾಗುತ್ತಿದ್ದಾನೆ. ಆದರೆ ನಮ್ಮ ಸಂಪ್ರದಾಯದಲ್ಲೇ ಬಂದಿರುವ ಯೋಗವನ್ನು ಅಭ್ಯಾಸ ಮಾಡಲು ನಿಯಮಿತ ಸಮಯ ಮೀಸಲಿಟ್ಟರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.ಭಾರತದಲ್ಲಿ ಯೋಗವು ವೇದಗಳ ಪೂರ್ವ ಹಾಗೂ ವೇದಗಳ ಕಾಲದಲ್ಲಿ ಅಸ್ತಿತ್ವ ಇರುವ ಉಲ್ಲೇಖವನ್ನು ನಾವು ನೋಡಬಹುದು. 2000 ವರ್ಷಗಳ ಇತಿಹಾಸವಿರುವ ಯೋಗ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಪೂರಕವಾಗಿದೆ. ಪ್ರತಿದಿನ ನಾವು ಯೋಗವನ್ನು ಅಭ್ಯಾಸ ಮಾಡಿಕೊಂಡರೆ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದರು. ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಗೂ ಉಪನ್ಯಾಸಕರು ಯೋಗಭ್ಯಾಸದಲ್ಲಿ ಭಾಗವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ.ಹೆಗಡೆ ಇತರರಿದ್ದರು.ತಾಯ್ನೆಲದಲ್ಲಿ ಯೋಗ ಪರಂಪರೆ ನಿರಂತರವಾಗಿರಲಿ: ಸಾಯಿನಾಥ ಸ್ವಾಮೀಜಿ
ಶಿವಮೊಗ್ಗ: ಯೋಗ ದೈನಂದಿನ ಬದುಕಿನ ಅವಿಭಾಜ್ಯ ಕಾರ್ಯವಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು.ಇಲ್ಲಿನ ಗುರುಪುರದ ಬಿಜಿಎಸ್ ಶಾಲಾ ಮತ್ತು ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಇದು ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಅವಿಭಾಜ್ಯ ಅಂಗವಾಗಿರಬೇಕು ಎಂದರು.ಯೋಗ ಭಾರತದ ಪ್ರಾಚೀನ ಕಲೆ ಇದನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ, 2014ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಯೋಗದ ಬಗ್ಗೆ ಪ್ರಸ್ತಾಪಿಸಲಾಯಿತು. ಆ ಸಂದರ್ಭದಲ್ಲಿ 177 ರಾಷ್ಟ್ರಗಳು ಇದಕ್ಕೆ ಒಪ್ಪಿಗೆಯನ್ನು ಸೂಚಿಸಿದವು ಇದರ ಪರಿಣಾಮವಾಗಿ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.ಪ್ರಸ್ತುತ ದಿನಮಾನಗಳಲ್ಲಿ ವಿದೇಶಿಯರು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತಾರೆ. ದುರಂತವೆಂದರೆ ಭಾರತದಲ್ಲಿಯೇ ಯೋಗದ ಅಭ್ಯಾಸ ನಿರಂತರ ವಾಗಿ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ನಮ್ಮ ದೇಶದ ಮೂಲವಾಗಿರುವ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಪ್ರತಿಯೊಬ್ಬ ರೂ ಆರೋಗ್ಯವಂತರಾಗಿ, ಸದಾ ಲವಲವಿಕೆಯಿಂದಿರಲೂ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಭ್ಯಾಸವನ್ನು ನಿಯಮಿತವಾಗಿ ರೂಢಿಸಿ ಕೊಳ್ಳುವುದು ಉತ್ತಮ ಎಂದರು.ಜ್ಞಾನದಲ್ಲಿ 18 ಪಾದಗಳಿದ್ದು , ಅದರಲ್ಲಿ ನಾಲ್ಕು ಯೋಗಗಳು ಇರುತ್ತವೆ. ಜ್ಞಾನ ಯೋಗ, ರಾಜಯೋಗ, ಕರ್ಮ ಯೋಗ, ಭಕ್ತಿ ಯೋಗ ಎಂಬ ನಾಲ್ಕು ವಿಭಾಗಗಳಿದ್ದು , ಈ ನಾಲ್ಕು ಭಾಗಗಳಲ್ಲಿ ನಾವು ಪ್ರತಿನಿತ್ಯ ಯೋಗ ಅಭ್ಯಾಸವನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್., ಉಪನ್ಯಾಸಕ ಸಂದೀಪ್ ಶೆಟ್ಟಿ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಮಾಲತೇಶ್ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರಿದ್ದರು.
ಯೋಗಯು ಪ್ರತಿದಿನದ ಚಟುವಟಿಕೆ ಭಾಗವಾಗಲಿ: ಯೋಗಪಟು ಡಿ.ನಾಗರಾಜ್ಭದ್ರಾವತಿ: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ನಮ್ಮ ಪ್ರತಿದಿನದ ಚಟುವಟಿಕೆಯಲ್ಲಿ ಯೋಗ ಸಹ ಅಳವಡಿಸಿಕೊಳ್ಳಿ ಎಂದು ಹಿರಿಯ ಅಂತಾರಾಷ್ಟ್ರೀಯ ಯೋಗಪಟು ಡಿ.ನಾಗರಾಜ್ ಹೇಳಿದರು.ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಯೋಗ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿ ದಿನದ ಆಚರಣೆಯಾಗಬೇಕು ಎಂದರು. ಯೋಗ ಕಾರ್ಯಕ್ರಮದ ಸಂಚಾಲಕ, ಓಬಿಸಿ ಮೋರ್ಚಾದ ಅಧ್ಯಕ್ಷ ರಾಜಶೇಖರ್ ಉಪ್ಪಾರ, ಮಂಡಲದ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಕಾ.ರಾ ನಾಗರಾಜ್, ಹಿರಿಯ ಯೋಗಪಟು ಮಂಜುನಾಥ್ ರಾವ್, ಕೇಶವಸಾಗರ್, ವಸಂತಣ್ಣ, ಮಂಜುನಾಥ್, ವಾಸುದೇವ ಶೆಟ್ಟಿ ಇತರರಿದ್ದರು.