ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ವಿಶೇಷ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜ್ಞಾನ ಮತ್ತು ಕೌಶಲ್ಯ ಎರಡೂ ಸಮನ್ವಯಗೊಂಡಾಗಲೇ ವ್ಯಕ್ತಿತ್ವದ ಪೂರ್ಣತೆ ಸಾಧ್ಯ. ಈ ಎರಡನ್ನೂ ಬೆಸೆಯುವ ಅತ್ಯಂತ ಪರಿಣಾಮಕಾರಿ ಸಾಧನಗಳಲ್ಲಿ ದಿನಪತ್ರಿಕೆಯೂ ಒಂದು. ಜಗತ್ತಿನ ಆಗುಹೋಗುಗಳನ್ನು ಅರಿಯುವುದರ ಜೊತೆಗೆ, ವಿಚಾರಗಳನ್ನು ವಿಶ್ಲೇಷಿಸುವ ಮತ್ತು ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯವನ್ನು ಪತ್ರಿಕೆಗಳ ಓದು ಬೆಳೆಸುತ್ತದೆ ಎಂದು ತಿಳಿಸಿದರು.
ನಾವು ಏನನ್ನು ಕಲಿಯಬೇಕು, ಹೇಗೆ ಕಲಿಯಬೇಕು ಹಾಗೂ ಕಲಿತ ವಿಚಾರಗಳನ್ನು ಬದುಕಿನಲ್ಲಿ ಹೇಗೆ ಅನುಷ್ಠಾನಗೊಳಿಸಬೇಕು ಎಂಬುದಕ್ಕೆ ದಿನಪತ್ರಿಕೆಗಳು ಹೊಸ ದೃಷ್ಟಿಕೋನವನ್ನು ನೀಡುತ್ತವೆ. ಓದು ಕೇವಲ ಮಾಹಿತಿಯ ಸಂಗ್ರಹವಾಗದೆ, ಅದು ಚಿಂತನೆಗೆ, ಚಿಂತನೆ ಕ್ರಿಯೆಗೆ ಹಾಗೂ ಕ್ರಿಯೆ ಸಾಧನೆಗೆ ದಾರಿ ಮಾಡಿಕೊಡಬೇಕು ಎಂದು ತಿಳಿಸಿದರು.ಎನ್‌ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಮಾತನಾಡಿ, ಸೃಜನಶೀಲ ಚಿಂತನೆ ಹಾಗೂ ಓದುವ ಹವ್ಯಾಸವನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ವಿದ್ಯಾರ್ಥಿನಿ ನಿಲಯದ ಪ್ರತಿಯೊಂದು ಕೊಠಡಿಗೂ ಆಡಳಿತ ಮಂಡಳಿಯಿಂದ ದಿನಪತ್ರಿಕೆಗಳನ್ನು ಒದಗಿಸಲಾಗುತ್ತಿದೆ. ಪತ್ರಿಕೆಗಳು ವಿವಿಧ ವಿಚಾರಗಳನ್ನು ವಿದ್ಯಾರ್ಥಿನಿಯರ ಮುಂದಿಡುವುದರ ಜೊತೆಗೆ, ನಾವೀನ್ಯ ವಿಷಯದ ಕುರಿತು ಪರಸ್ಪರ ಚರ್ಚಿಸಲು ಮತ್ತು ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ವೇದಿಕೆಯಾಗಿ ರೂಪಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ‘ಜೆನ್ ಜಿ ಕಣ್ಣುಗಳಲ್ಲಿ ಭವಿಷ್ಯದ ಭಾರತ’ ಎಂಬ ವಿಷಯದ ಕುರಿತು ನಡೆದ ವಿಶೇಷ ಪ್ರಬಂಧ ಸ್ಪರ್ಧೆಯಲ್ಲಿ ಉತ್ತಮ ಪ್ರಬಂಧ ರಚಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
---------------------
ಶಿವಮೊಗ್ಗ ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ವಿಶೇಷ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.