ಮತದಾನ ಹೆಚ್ಚಳಕ್ಕೆ ಪ್ರತಿಯೊಬ್ಬರು ಸಹಕರಿಸಿ: ಸಿಇಒ ರಾಹುಲ್ ರತ್ನಂ ಪಾಂಡೆ

KannadaprabhaNewsNetwork |  
Published : Mar 29, 2024, 12:55 AM IST
೨೮ವೈಎಲ್‌ಬಿ೨:ಯಲಬುರ್ಗಾದ ತಾಲೂಕಾ ಕ್ರೀಡಾಂಗಣದಲ್ಲಿ ಲೋಕಸಭೆ ಚುನಾವಣೆ ನಿಮಿತ್ಯ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಯುವ ಮತದಾರರ ನೋಂದಣಿ ಹಾಗೂ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಪತ್ರಕರ್ತರು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ತಂಡದಿಂದ ಗುರುವಾರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಈ ಬಾರಿಯ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನಕ್ಕೆ ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಈ ಬಾರಿಯ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನಕ್ಕೆ ಮುಂದಾಗಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಯುವ ಮತದಾರರ ನೋಂದಣಿ ಹಾಗೂ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಪತ್ರಕರ್ತರು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ತಂಡದಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಶೇ.೧೦೦ರಷ್ಟು ಮತದಾನಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯದೆ ಮತದಾನಕ್ಕೆ ಕೈ ಜೋಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಚುನಾವಣೆಯಲ್ಲಿ ಯುವ ಮತದಾರರ ಪಾತ್ರ ಪ್ರಮುಖವಾಗಿದ್ದು ಲೋಕಸಭೆ ವ್ಯಾಪ್ತಿಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪತ್ರಕರ್ತರು ಮತ್ತು ಅಧಿಕಾರಿಗಳು ಸೌಹಾರ್ದಯುತವಾಗಿ ಚುನಾವಣೆ ಜಾಗೃತಿ ಮೂಡಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದರು.

ಸಹಾಯಕ ಚುನಾವಣಾಧಿಕಾರಿ ರುದ್ರೇಶಪ್ಪ ಮತನಾಡಿ, ಕ್ಷೇತ್ರದಲ್ಲಿ ೫ ಸಾವಿರಕ್ಕೂ ಅಧಿಕ ಯುವ ಮತದಾರರು ಇದ್ದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಅಂಗವಿಕಲರಿಗೆ ಮನೆಯಲ್ಲಿ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆನ್ ಲೈನ್ ಆ್ಯಪ್‌ನಲ್ಲಿ ಅಂಗವಿಕಲರು ನೋಂದಾಯಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ನಿರ್ಬೀತಿಯಿಂದ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದು ಹೇಳಿದರು.

ಪತ್ರಕರ್ತರು ಮತ್ತು ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಅಧಿಕಾರಿಗಳ ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿಇಒ ರಾಹುಲ್ ರತ್ನಂ ಪಾಂಡೆ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆದು ಜಯಶಾಲಿಯಾಯಿತು. ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಪಡೆಯಿತು. ಈ ಪಂದ್ಯಾವಳಿಯನ್ನು ಚುನಾವಣೆ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿತ್ತು. ಕ್ರಿಕೆಟ್ ಪಂದ್ಯಾವಳಿಗೆ ಯುವ ಮಹಿಳಾ ಮತದಾರರ ಮೂಲಕ ಟಾಸ್ ಮಾಡಿಸಲಾಯಿತು. ನೂರಾರು ಜನರು ಪಂದ್ಯ ವೀಕ್ಷಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಬಸವರಾಜ ತೆನ್ನಳ್ಳಿ, ಅಶೋಕ ಶಿಗ್ಗಾವಿ, ತಾಪಂ ಇಒ ಸಂತೋಷ ಪಾಟೀಲ, ಅಕ್ಷರ ದಾಸೋಹ ಅಧಿಕಾರಿ ಎಫ್‌.ಎಂ. ಕಳ್ಳಿ, ಅಧಿಕಾರಿಗಳಾದ ವಿ.ಕೆ. ಬಡಿಗೇರ, ಹನುಮಂತಗೌಡ ಪಾಟೀಲ್, ಪ್ರಾಣೇಶ ಹಾದಿಮನಿ, ಶಿವಶಂಕರ ಕರಡಕಲ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿ, ನಾಗರಾಜ ಬೆಣಕಲ್ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’