ಯಲಬುರ್ಗಾ: ಪ್ರತಿಯೊಬ್ಬ ಮಹಿಳೆಯರು ತಮ್ಮ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಮೂಲಕ ಅವರನ್ನು ಆರೋಗ್ಯವಂತರನ್ನಾಗಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.
ಇಂದಿನ ಬದಲಾದ ನಮ್ಮ ಜೀವನ ಶೈಲಿಯಲ್ಲಿ ಪಾರಂಪರಿಕ ಹಳೇ ಆಹಾರ ಪದ್ಧತಿಯನ್ನು ನಾವು ದೂರ ಇಟ್ಟಿದ್ದೇವೆ. ಹೀಗಾಗಿ ಚಿಕ್ಕ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಇತ್ತೀಚಿನ ಆಹಾರದಲ್ಲಿ ಗುಣಮಟ್ಟದ ಸರಿಯಾದ ಪೋಷಕಾಂಶಗಳು ಸಿಗುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರಲು ಮುಖ್ಯವಾದ ಕಾರಣವಾಗಿದೆ. ಪ್ರತಿ ಅಂಗನವಾಡಿ, ಶಾಲೆಗಳಲ್ಲಿ ಸಿರಿಧಾನ್ಯ ಹಾಗೂ ಹೆಚ್ಚು ಪೋಷಕಾಂಶ ಇರುವ ಮೊಳಕೆಕಾಳು ಸೇವನೆಗೆ ಕೊಡಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಡದಪ್ಪ ಮಾಳೇಕೊಪ್ಪ ಮಾತನಾಡಿ, ತಾಲೂಕಿನ ಎಲ್ಲ ಕೇಂದ್ರದಲ್ಲಿ ಇಲಾಖೆಯಿಂದ ಶಿಶುಮಕ್ಕಳು, ಗರ್ಭಿಣಿಯರು, ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಪೋಷಣ್ ಅಭಿಯಾನ ಮೂಲಕ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಹಾಗೂ ಟಿಎಚ್‌ಒ ಡಾ. ಅಂಬರೀಶ್ ನಾಗರಾಳ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ, ಮಹಿಳೆಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.