ಭಾರತಸೇನೆಗೆ ಒಳಿತಾಗಲೆಂದು ನಿತ್ಯ ಪ್ರಾರ್ಥಿಸೋಣ: ಸತೀಶ್

KannadaprabhaNewsNetwork | Published : May 11, 2025 1:23 AM
Follow Us

ಸಾರಾಂಶ

ಪಾಕಿಸ್ತಾನ ದುಷ್ಕರ್ಮಿಗಳ ವಿರುದ್ಧ ಭಾರತ ಸೇನೆ ನಡೆಸುತ್ತಿರುವ ದಾಳಿ ಯಶಸ್ವಿಯಾಗಲಿ. ನಮ್ಮ ಸೇನಾವೀರರಿಗೆ ಒಳಿತಾಗಲಿ ಎಂದು ನಿತ್ಯ ಪೂಜಾ ವೇಳೆಯಲ್ಲಿ ಪ್ರಾರ್ಥಿಸೋಣ

ಮಹಾಶಿವಭಕ್ತೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸತೀಶ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪಾಕಿಸ್ತಾನ ದುಷ್ಕರ್ಮಿಗಳ ವಿರುದ್ಧ ಭಾರತ ಸೇನೆ ನಡೆಸುತ್ತಿರುವ ದಾಳಿ ಯಶಸ್ವಿಯಾಗಲಿ. ನಮ್ಮ ಸೇನಾವೀರರಿಗೆ ಒಳಿತಾಗಲಿ ಎಂದು ನಿತ್ಯ ಪೂಜಾ ವೇಳೆಯಲ್ಲಿ ಪ್ರಾರ್ಥಿಸೋಣ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಕರೆ ನೀಡಿದರು.

ನಗರದ ಬಸವಭವನ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಮಹಾಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಾಕಿಸ್ತಾನದ ದುಷ್ಕರ್ಮಿಗಳು ಪಹಲ್ಗಾಂನಲ್ಲಿ ವಿನಾಕಾರಣ ಭಾರತೀಯರನ್ನು ಕೊಂದು ಕೆಣಕಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ವೀರಸೇನೆ ಹೋರಾಟ ಆರಂಭಿಸಿದೆ. ಈ ಹೋರಾಟ ಯಶಸ್ವಿಗೊಳ್ಳಬೇಕು. ನಮ್ಮ ಸೇನಾನಿಗಳು ಸುರಕ್ಷಿತವಾಗಲಿ ಎಂದು ಇಡೀ ಭಾರತವೇ ಪ್ರಾರ್ಥಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ಹೇಮರೆಡ್ಡಿ ಮಲ್ಲಮ್ಮ ಶಿವಭಕ್ತಿ ಹಾಗೂ ರೆಡ್ಡಿ ಸಮುದಾಯಕ್ಕೆ ಎಂದೂ ಕಷ್ಟ ಬಾರದಿರಲಿ ಎಂದು ದೇವರಲ್ಲಿ ಕೇಳಿಕೊಂಡು ಸಮುದಾಯದ ಒಳಿತಿಗೆ ಹಾರೈಸಿದ ಮಲ್ಲಮ್ಮನವರ ಆಶಯಗಳು ಆದರ್ಶನೀಯವಾಗಿವೆ. ಸಮುದಾಯಕ್ಕೆ ಒಳ್ಳೆಯದಾಗಬೇಕು ಎಂಬ ತತ್ವ ಪ್ರತಿಯೊಬ್ಬರೂ ಪಾಲಿಸಬೇಕು. ನನಗೆ ಎಂಬ ಸ್ವಾರ್ಥ ಬಿಟ್ಟು ನಮಗೆ ಎಂಬ ನಿಸ್ವಾರ್ಥದ ವಿಚಾರಗಳು ಮೈದಳೆಯಬೇಕು ಎಂದು ಅಭಿಪ್ರಾಯಪಟ್ಟರು.

ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾಸಾದ್ವಿಯಾದ ಹೇಮರೆಡ್ಡಿ ಮಲ್ಲಮ್ಮ ಎಲ್ಲರಿಗೂ ಆದರ್ಶ ಮಹಿಳೆಯಾಗಿದ್ದು, ಭಕ್ತಿ ಮಾರ್ಗದ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಮಹಿಮೆ ನಾಡಿಗೆ ಸಾರಿದ್ದಾರೆ. ಇಂದಿಗೂ ಕೂಡ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕಣ್ಣಿರು ಎಂಬ ಸ್ಥಳದಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ನೋಡಬಹುದು ಎಂದರು.

ವಿಶೇಷ ಉಪನ್ಯಾಸ ನೀಡಿದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಅಧ್ಯಾಪಕಿ ಸುಶೀಲ ಸಿರೂರು, 15ನೇ ಶತಮಾನದ ಪ್ರಸಿದ್ಧ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾರೆ. ಕೌಟುಂಬಿಕ ಸಂಕಷ್ಟ ಮೆಟ್ಟಿ ನಿಂತು, ಆದರ್ಶ ಮೌಲ್ಯ ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ವಿ.ಎಂ. ವೀರಭದ್ರಯ್ಯ ತಂಡದವರು ವಚನ ಸಂಗೀತ ಪ್ರಸ್ತುತ ಪಡಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಮಹಾನಗರ ಪಾಲಿಕೆಯ ಸದಸ್ಯರಾದ ಸುರೇಖಾ ಮಲ್ಲನಗೌಡ, ಸಹಾಯಕ ಆಯುಕ್ತ ಪಿ.ಪ್ರಮೋದ್ ಹಿರಿಯ ವಕೀಲ ಎನ್.ಅಯ್ಯಪ್ಪ, ವೀವಿ ಸಂಘದ ಮಾಜಿ ಅಧ್ಯಕ್ಷ ಉಡೇದ ಬಸವರಾಜ, ಮಾಜಿ ಮೇಯರ್ ಪಾರ್ವತಿ ಇಂದುಶೇಖರ್, ಕೋಳೂರು ಮಲ್ಲಿಕಾರ್ಜುನಗೌಡ, ಮಹಾಲಿಂಗಯ್ಯ, ಸುಮಾರೆಡ್ಡಿ, ಗಣಪಾಲ್ ಐನಾಥರೆಡ್ಡಿ, ಕೋಳೂರು ಚಂದ್ರಶೇಖರಗೌಡ, ಎಣ್ಣೆ ಎರಿಸ್ವಾಮಿ, ಜೆಎಂಆರ್ ಬಸವರಾಜ್, ಹಚ್ಚೊಳ್ಳಿ ಶರಣೇಗೌಡ ಸೇರಿದಂತೆ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಂಭ್ರಮದ ಮೆರವಣಿಗೆ:

ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು.

ಮೆರವಣಿಗೆಯು ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಎಸ್‌ಪಿ ಸರ್ಕಲ್ ಮೂಲಕ ಬಸವ ಭವನದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.