ಕುಂದಗೋಳ: ತಾಲೂಕಿನ ಗುಡೇನಕಟ್ಟಿಯಲ್ಲಿ ಅನಾರೋಗ್ಯದಿಂದ 8 ಮಂಗಗಳು ಮೃತಪಟ್ಟಿದ್ದು, ಗ್ರಾಮಸ್ಥರು ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಶುಕ್ರವಾರ ಪುಣ್ಯಾರಾಧನೆ ಮಾಡಿದ್ದಾರೆ.
ಗ್ರಾಮದ ಸತೀಶ ಹಿರೇಮಠ ಬೆಳಗ್ಗೆ ಗದ್ದುಗೆಗೆ ಪಂಚಾಮೃತ ಅಭಿಷೇಕ ಹಾಗೂ ಪುಣ್ಯಾರಾಧನೆ ಕಾರ್ಯಕ್ರಮ ನೆರವೇರಿಸಿದರು. ನಂತರ ಮಂಗಗಳು ತಿನ್ನುವ ಹಣ್ಣು ಇನ್ನಿತರ ವಸ್ತುಗಳನ್ನು ಗದ್ದುಗೆಗೆ ನೈವೇದ್ಯ ಅರ್ಪಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಗಳಾರತಿ ಮಾಡುವ ಮೂಲಕ ವಿಸರ್ಜನೆ ಮಾಡಲಾಯಿತು. ಗ್ರಾಮದ ಕೆಲ ಯುವಕರ ಜತೆ ಪ್ರೀತಿಯಿಂದ ಇದ್ದ ಮಂಗಗಳನ್ನು ನೆನೆದು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡು ಬಂತು.
ಶಾಂತಪ್ಪ ಕುಸುಗಲ್, ದೇವಪ್ಪ ಹೊಸಳ್ಳಿ, ಬಸವರಾಜ ಯೋಗಪ್ಪನವರ, ಮಲ್ಲಪ್ಪ ಕಂಬಳಿ, ಮಾನಪ್ಪ ಬಡಿಗೇರ, ಶಿವಲಿಂಗಪ್ಪ ಕಳಸಣ್ಣವರ, ಶೇಖಪ್ಪ ಮಲ್ಲಿಗವಾಡ, ಮುದುಕಪ್ಪ ಪೂಜಾರ, ಮುದುಕಪ್ಪ ಮಾದರ್, ಬಸು ಪೂಜಾರ ಸೇರಿದಂತೆ ಅನೇಕರು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದ್ದರು.