ಮುಂಡಗೋಡ: ಧರ್ಮವನ್ನು ನಾವು ಉಳಿಸಿದರೆ ಮಾತ್ರ ಅದು ನಮ್ಮನ್ನು ಉಳಿಸುತ್ತದೆ. ಜಾಗ್ರತ ಸಮಾಜ ನಿರ್ಮಾಣವಾಗಬೇಕಿದೆ. ಧರ್ಮ ಜಾಗೃತಿಯಾದರೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿಕೊಂಡು ಹೋಗುವ ಸಂಗತಿಯನ್ನು ಗಮನಿಸಬಹುದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ನವಲಗುಂದ ಗವಿ ಮಠದ ಬಸವಲಿಂಗ ಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ, ಜಾತ್ರೆಗಳು ಸಂಬಂಧ ಹಾಗೂ ಭಾವನೆಗಳನ್ನು ಬೆಸೆಯುವ ಕೆಲಸ ಮಾಡುತ್ತವೆ. ಬೇರೆ ಬೇರೆ ದೇಶಗಳು ಪರಸ್ಪರ ಬಾಂಬ್ ಹಾಕಿ ಯುದ್ಧ ಮಾಡುವ ಮೂಲಕ ದ್ವೇಶದ ಜ್ವಾಲೆಯಲ್ಲಿ ಬೇಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಜನ ಪ್ರೀತಿ-ವಿಶ್ವಾಸದಿಂದ ಜಾತ್ರೆಯನ್ನು ಆಚರಿಸುವ ಮೂಲಕ ಭಾವೈಕ್ಯ ಮೆರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬಂಕಾಪುರದ ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಾತನಾಡಿ, ಸಂಸ್ಕಾರ ನೀಡುವಂತಹ ಆಚರಣೆಗಳು ಹೆಚ್ಚೆಚ್ಚಾಗಿ ನಡೆಯಬೇಕು. ಧಾರ್ಮಿಕ ಜಾತ್ರೆಗಳು ನಡೆಯುವುದರಿಂದ ಮಕ್ಕಳಲ್ಲಿ ಸಂಸ್ಕಾರ ಪರಿಚಯಿಸಿದಂತಾಗುತ್ತದೆ ಎಂದರು.ಮುಂಡಗೋಡ ಹಿರೇಮಠದ ವೇದಮೂರ್ತಿ ರುದ್ರಮುನಿ ಮಹಾಸ್ವಾಮಿಗಳು, ಹಿರಿಯರಾದ ಸಿ.ಎಸ್. ಗಾಣಿಗೇರ, ಉಮೇಶ ಬಿಜಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ನಾಗಭೂಷಣ ಹಾವಣಗಿ, ಸಂಗಮೇಶ ಕೊಳ್ಳಾನವರ, ಮಲ್ಲಿಕಾರ್ಜುನ ಗೌಳಿ ಉಪಸ್ಥಿತರಿದ್ದರು. ಮಂಜುನಾಥ ಪಾಟೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.