ಮಹಾಂತ ಶ್ರೀಗಳ ಜೋಳಿಗೆಯಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಲಿ

KannadaprabhaNewsNetwork |  
Published : Aug 02, 2024, 12:55 AM IST
1ಡಿಡಬ್ಲೂಡಿ3ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಿಮಾನ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.  | Kannada Prabha

ಸಾರಾಂಶ

ಬಹಳಷ್ಟು ವ್ಯಕ್ತಿಗಳು ವ್ಯಸನಗಳಿಂದ ತಾವಷ್ಟೇ ಹಾಳಾಗದೇ ಇಡೀ ಕುಟುಂಬವನ್ನೇ ನಾಶ ಮಾಡುತ್ತಾರೆ. ಬೆಂಕಿ ದೇಹ ಮಾತ್ರ ಸುಟ್ಟರೆ, ವ್ಯಸನ ದೇಹ ಮತ್ತು ಆತ್ಮ ಎರಡನ್ನು ಸುಡುತ್ತದೆ. ಮಹಾಂತ ಅಪ್ಪಗಳು ವ್ಯಸನ ಮುಕ್ತ ಸಮಾಜ ರೂಪಿಸಲು ಜೋಳಿಗೆ ಹಾಕಿದ್ದು ಮಾತ್ರವಲ್ಲ, ಹೊರದೇಶದಲ್ಲೂ ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಿದರು.

ಧಾರವಾಡ:

ಇಳಕಲ್ ಚಿತ್ತರಗಿ ಮಹಾಂತಮಠದ ಡಾ. ಮಹಾಂತ ಶಿವಯೋಗಿ ಅಪ್ಪಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಅವರು ತೋರಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಿದರೆ, ಆರೋಗ್ಯಕರ ಸಮಾಜ ಸಾಧ್ಯ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಿಮಾನ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಹಾಗೂ ವಿಚಾರ ಸಂಕಿರಣದಲ್ಲಿ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದ ಮಾತನಾಡಿದರು.

ಬಹಳಷ್ಟು ವ್ಯಕ್ತಿಗಳು ವ್ಯಸನಗಳಿಂದ ತಾವಷ್ಟೇ ಹಾಳಾಗದೇ ಇಡೀ ಕುಟುಂಬವನ್ನೇ ನಾಶ ಮಾಡುತ್ತಾರೆ. ಬೆಂಕಿ ದೇಹ ಮಾತ್ರ ಸುಟ್ಟರೆ, ವ್ಯಸನ ದೇಹ ಮತ್ತು ಆತ್ಮ ಎರಡನ್ನು ಸುಡುತ್ತದೆ ಎಂದ ಹೊರಟ್ಟಿ, ಮಹಾಂತ ಅಪ್ಪಗಳು ವ್ಯಸನ ಮುಕ್ತ ಸಮಾಜ ರೂಪಿಸಲು ಜೋಳಿಗೆ ಹಾಕಿದ್ದು ಮಾತ್ರವಲ್ಲ, ಹೊರದೇಶದಲ್ಲೂ ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಿದರು. ಸಮಾಜವನ್ನು ವ್ಯಸನ ಮುಕ್ತಗೊಳಿಸಲು ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ವ್ಯಸನ ಮುಕ್ತ ದಿನಾಚರಣೆ ಆಚರಿಸಬೇಕು ಎಂಬ ಶ್ರೀಗಳ ಅಪೇಕ್ಷೆ ಈಗ ಈಡೇರಿದೆ. ಅವರ ಜನ್ಮ ದಿನದ ಆ. 1ನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಮನೋವೈದ್ಯ ಡಾ. ಸುಧೀಂದ್ರ ಹುದ್ದಾರ ಮಾನಸಿಕ, ಆರೋಗ್ಯ ಮತ್ತು ವ್ಯಸನ ಮುಕ್ತತೆಯ ಉಪಾಯಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಯುವ ಜನತೆಯೇ ಮಾದಕ ವಸ್ತುಗಳ ಬಳಕೆ ಹಾಗೂ ದುರ್ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಮಾದಕ, ಮದ್ಯ ಸೇವನೆಯಿಂದ ದೈಹಿಕವಾಗಿ ದುಷ್ಪರಿಣಾಮ ಕಂಡು ಬರುವುದಲ್ಲದೇ ಮಾನಸಿಕ ಕಾಯಿಲೆಗಳಿಗೂ ಸಹ ದಾರಿ ಮಾಡಿಕೊಡುತ್ತದೆ. ಎಲ್ಲ ವ್ಯಸನಗಳಿಂದ ಮುಕ್ತರಾಗಲು ಚಿಕಿತ್ಸಾ ಆಪ್ತ ಸಮಾಲೋಚನೆ ಲಭ್ಯವಿದ್ದು, ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿಮಾನ್ಸ್‌ ನಿರ್ದೇಶಕ ಡಾ. ಅರುಣಕುಮಾರ ಸಿ., ಮಾನಸಿಕ ಆರೋಗ್ಯ ಎಲ್ಲ ಆರೋಗ್ಯಗಳ ಮತ್ತು ಸದೃಢತೆಯ ಸಂಕೇತವಾಗಿದೆ ಎಂದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಸಣ್ಣ ವಯಸ್ಸಿನ ಮಕ್ಕಳು ಗಾಂಜಾ, ಡ್ರಗ್ಸ್ ದಂತಹ ದುಶ್ಚಟಗಳಿಗೆ ಬಲಿ ಆಗುತ್ತಿದ್ದಾರೆ. ಇವರಿಗೆ ಪಾಲಕರು ಇತರರು ಸರಿಯಾಗಿ ಗಮನಿಸದೇ ಇರುವುದು ಕಾರಣ. ಪಾಲಕರು ಮಕ್ಕಳ ಪಾಲನೆ ಬಗ್ಗೆ ಜವಾಬ್ದಾರಿಯಿಂದ ವರ್ತಿಸಬೇಕೆಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿದರು. ಡಿಡಿಪಿಐ ಎಸ್.ಎಸ್. ಕೆಳದಿಮಠ ಹಾಗೂ ಸಾನ್ನಿಧ್ಯ ವಹಿಸಿದ್ದ ಮನಗುಂಡಿ ಬಸವಾನಂದ ಸ್ವಾಮೀಜಿ ಮಾತನಾಡಿದರು. ವಾರ್ತಾ ಸಹಾಯಕ ಡಾ. ಸುರೇಶ ಹಿರೇಮಠ ಸ್ವಾಗತಿಸಿದದರು. ಡಾ. ಮಂಜುನಾಥ ಭಜಂತ್ರಿ ಪರಿಚಯಿಸಿದರು. ಪ್ರಶಾಂತ ಪಾಟೀಲ ನಿರೂಪಿಸಿದರು. ಅಶೋಕ ಕೋರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ