ಬಸವ ಹಾದಿಯಲ್ಲಿ ಸಮ ಸಮಾಜ ನಿರ್ಮಿಸೋಣ

KannadaprabhaNewsNetwork |  
Published : Apr 21, 2026, 02:30 AM IST
ಫೋಟೋವಿವರ- (20ಎಚ್‌ಪಿಟಿ3) ಹೊಸಪೇಟೆ ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಸೋಮವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮಾತನಾಡಿದರು | Kannada Prabha

ಸಾರಾಂಶ

ಬಸವಣ್ಣನವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು.

ಹೊಸಪೇಟೆ: ಕಾಯಕವೇ ಕೈಲಾಸ ಎಂದು ಸಾರಿದ ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಸಮ ಸಮಾಜ ನಿರ್ಮಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕರೆ ನೀಡಿದರು.

ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅದರಂತೆ ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮ, ವರ್ಗ ಎನ್ನುವ ಭೇದಭಾವ ಅಳಿದು ಸಮ ಸಮಾಜ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಕೊಟ್ಟೂರುಸ್ವಾಮಿ ಮಠದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಅವರು ಬಣ್ಣಿಸಿದರು.

ಬಸವಣ್ಣನವರು ಜಾತ್ಯತೀತ ವಿವಾಹಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ಅವರ ಈ ತತ್ತ್ವವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಕೊಟ್ಟೂರುಸ್ವಾಮಿ ಮಠದ ವತಿಯಿಂದ ಬಸವ ಜಯಂತಿಯ ಅಂಗವಾಗಿ 29 ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸಿರುವುದು ಸಂತಸದ ಸಂಗತಿ ಎಂದ ಅವರು. ಪ್ರತಿಯೊಬ್ಬರು ಬಸವಣ್ಣನವರ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕೊಟ್ಟೂರುಸ್ವಾಮಿ ಮಠದ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರು ಸ್ತ್ರೀ ಕುಲಕ್ಕೆ ಸ್ವಾತಂತ್ರ್ಯ ಮತ್ತು ಗೌರವ ನೀಡಿದ ಜಗತ್ತಿನ ಮೊದಲ ವ್ಯಕ್ತಿ ಎಂದು ಅವರು ಸ್ಮರಿಸಿದರು.

ಬಿದ್ದವರನ್ನು ಎತ್ತುವವನೇ ಬಸವ ಎಂಬ ನಾಗಿದೇವನ ಮಾತುಗಳನ್ನು ನೆನೆಯುತ್ತಾ, ಜಾತಿ, ಮತ ಮತ್ತು ಲಿಂಗ ಭೇದವಿಲ್ಲದ ಸಮಾಜ ನಿರ್ಮಾಣ ಬಸವಣ್ಣನವರ ಗುರಿಯಾಗಿತ್ತು. ಅದರಂತೆ ಸಮಾಜ ಸುಧಾರಣೆಗೆ ವ್ಯಕ್ತಿ ಸುಧಾರಣೆ ಮುಖ್ಯವಾಗಿದ್ದು, ಬಸವಣ್ಣನವರ ವ್ಯಕ್ತಿತ್ವ ನಮಗೆ ಸದಾ ಆದರ್ಶವಾಗಿದೆ ಎಂದರು. ಬಸವಣ್ಣನವರು ಹಾಕಿಕೊಟ್ಟ ಇವನಾರವ ಇವನಾರವ ಎನ್ನದೆ ಇವ ನಮ್ಮವ ಎಂಬ ವಿಶ್ವಬಂಧುತ್ವದ ತತ್ವ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ ಎಂದರು.

ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಅವರು ವಿಶೇಷ ಉಪನ್ಯಾಸ ನೀಡಿ ಸಭೆಯಲ್ಲಿ ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ 53ನೇ ವರ್ಷದ ಉಚಿತ ಸಾಮೂಹಿಕ ವಿಹಾವ ಕಾರ್ಯಕ್ರಮದಲ್ಲಿ 29 ಜೋಡಿಗಳ ವಿವಾಹ ನಡೆಯಿತು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಉಪವಿಭಾಗಾಧಿಕಾರಿ ವಿವೇಕಾನಂದ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ವೈ. ಎ. ಕಾಳೆ, ತಹಶೀಲ್ದಾರ್ ಶೃತಿ ಸೇರಿದಂತೆ ಸಮಾಜದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವತಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಧರಣಿ
ಇಂದು ಉಜ್ಜಯನಿ ಮಹಾರಥೋತ್ಸವ