ಕೊಟ್ಟೂರು: ಯಾವುದೇ ಮಠ ಮಾನ್ಯಗಳು ನಡೆಸುವ ಸಾಮೂಹಿಕ ಮದುವೆ ಕಾರ್ಯಗಳಿಂದ ರಾಷ್ಟ್ರಕ್ಕೆ ಅಪಾರ ಪ್ರಮಾಣದ ಸಂಪತ್ತು ಉಳಿತಾಯವಾಗುತ್ತದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಪಟ್ಟಣದ ಚಾನುಕೋಟಿ ಮಠದಲ್ಲಿ ನಡೆದ ಮರುಳಸಿದ್ಧ, ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ಮದುವೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಸೋಮವಾರ ಮಾತನಾಡಿದರು.
ಚಾನುಕೋಟಿ ಮಠವು ಜಾತಿ ಮತ ಬೇಧ ಎಣಿಸಿದ ಎಲ್ಲ ಸಮುದಾಯಕ್ಕೆ ಅಕ್ಷರ, ಅನ್ನ ದಾಸೋಹ ನೀಡಿ, ಆರೋಗ್ಯ ತಪಾಸಣಾ ಶಿಬಿರ, ಉಪನ್ಯಾಸ ಕಾರ್ಯಗಳು, ಸಾಮೂಹಿಕ ವಿವಾಹಗಳಂತ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಆ ಮೂಲಕ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ದೊಡ್ಡದಾದ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಸರ್ವರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿರಿಸಿರುವ ದಂಪತಿಗಳು ಅನ್ಯೋನವಾಗಿರಬೇಕು. ಅವಿಭಕ್ತ ಕುಟುಂಬಕ್ಕೆ ಮಹತ್ವ ನೀಡಿ ಪರಂಪರೆಯನ್ನು ಉಳಿಸಬೇಕು ಎಂದರು.
ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಕ್ತರಿಂದ ಅಭಿವೃದ್ಧಿಗೊಳ್ಳುವ ಮಠ ಮಾನ್ಯಗಳು ಅದೇ ಭಕ್ತರಿಗಾಗಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. 35ವರ್ಷಗಳಿಂದ ನಮ್ಮ ಮಠದಿಂದ ಸಾಮೂಹಿಕ ವಿವಾಹ ಸಮಾರಂಭ ನಡೆಯಲು ಉಜ್ಜಯಿನಿ ಸದ್ಧರ್ಮ ಪೀಠದ ಹಿಂದಿನ ಹಾಗೂ ಈಗಿನ ಜಗದ್ಗುರುಗಳ ಹಾರೈಕೆಯೇ ಮುಖ್ಯ ಕಾರಣವಾಗಿದೆ ಎಂದರು.ಬೆಂಗಳೂರು ವಿಭೂತಿ ಪುರ ಮಠದ ಶ್ರೀಗಳು ಮಾತನಾಡಿದರು. ಮಠದ ಭಕ್ತರಾದ ಚಾಪಿ ಚಂದ್ರಪ್ಪ, ಅಡಕೆ ಮಂಜುನಾಥ, ಬದ್ದಿ ಮರಿಸ್ವಾಮಿ, ಐಟಿಐ ಮಲ್ಲಿಕಾರ್ಜುನ, ಜಿ.ಕಾರ್ತಿಕ, ಸಂತೋಷ, ಜಿ.ಸಿದ್ದಯ್ಯ, ಬಾಡದ ರುದ್ರಯ್ಯ ಸೇರಿ ಅನೇಕರು ಇದ್ದರು. ಆಕರ್ಷ ಹಳೆಮನೆ, ಅರವಿಂದ ಬಸಾಪುರ ನಿರ್ವಹಿಸಿದರು.