ಶೋಷಿತ ಧ್ವನಿ, ಸಮಸಮಾಜ ನಿರ್ಮಾಣದ ನಿರ್ಮಾತೃ ಬಸವಣ್ಣ: ಶಾಸಕ ಕೃಷ್ಣನಾಯ್ಕ

KannadaprabhaNewsNetwork |  
Published : Apr 21, 2026, 02:30 AM IST
ಹೂವಿನಹಡಗಲಿಯ ಹಿರೇಮಲ್ಲನಕೆರೆ ಮಠದಲ್ಲಿ ತಾಲೂಕ ಆಡಳಿತ ಮತ್ತು ಅಖಿಲ ಭಾರತ ವೀರಶೈವ ಮಹಾ ಸಭಾ ಸಹಯೋಗದಲ್ಲಿ ಜರುಗಿದ ಬಸವಣ್ಣನವರ ಜಯಂತಿಗೆ ಚಾಲನೆ ನೀಡಿದ ಶಾಸಕ ಕೃಷ್ಣನಾಯ್ಕ.  | Kannada Prabha

ಸಾರಾಂಶ

900 ವರ್ಷಗಳ ಹಿಂದೆಯೇ ಜಗತ್ತಿಗೆ ಪಾರ್ಲಿಮೆಂಟ್‌ ಕಲ್ಪನೆ ನೀಡಿದ್ದಾರೆ.

ಹೂವಿನಹಡಗಲಿ: ಬಸವಣ್ಣ 12ನೇ ಶತಮಾನದಲ್ಲೇ ಆಯುಧ ಇಲ್ಲದೇ ಕಲ್ಯಾಣದಲ್ಲಿ ಕ್ರಾಂತಿ ಮಾಡಿದ್ದಾರೆ. ಅಲ್ಲಮಪ್ರಭು ದೇವರ ನೇತೃತ್ವದಲ್ಲಿ ಶರಣರ ಚಿಂತನ-ಮಂಥನಗಳಲ್ಲಿ ಶೋಷಿತರ ಧ್ವನಿಯಾಗಿ, ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇಡೀ ಜಗತ್ತೇ ಕೊಂಡಾಡುವ ಕೆಲಸವನ್ನು ಬಸವಣ್ಣ ಮಾಡಿದ್ದಾರೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಹಿರೇಮಲ್ಲಕೆರೆ ಮಠದಲ್ಲಿ ತಾಲೂಕು ಆಡಳಿತ, ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ಬಸವಣ್ಣನವರ 893ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಚನಗಳಿಂದ ಸಮಾನತೆ ಸಾರಿದ ಬಸವಣ್ಣ ಇಷ್ಟಲಿಂಗ ಪೂಜೆ ಮೂಲಕ ನಮ್ಮಲ್ಲೇ ದೇವರಿದ್ದಾರೆಂದು ತೋರಿಸಿದ ಅವರು, 900 ವರ್ಷಗಳ ಹಿಂದೆಯೇ ಜಗತ್ತಿಗೆ ಪಾರ್ಲಿಮೆಂಟ್‌ ಕಲ್ಪನೆ ನೀಡಿದ್ದಾರೆ. ಇವರ ತತ್ವಗಳನ್ನು ಇಡೀ ವಿಶ್ವವೇ ಪರಿಪಾಲನೆ ಮಾಡುತ್ತಿದೆ. ಅವರು ಕಂಡ ಕನಸುಗಳನ್ನು ನಾವೆಲ್ಲ ಸೇರಿ ನನಸು ಮಾಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ, ಅಂದು ಸಮಾಜದಲ್ಲಿ 4 ವರ್ಗಗಳು ಸೃಷ್ಟಿಯಾಗಿದೆ. ಅತಿಯಾದ ಜಾತಿ ವ್ಯವಸ್ಥೆಯ ವಿಷಬೀಜವಿದ್ದ ವೇಳೆ ಬಸವಣ್ಣ ಸೇರಿದಂತೆ ಎಲ್ಲ ಶರಣರು, ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ಬರೆದಿದ್ದಾರೆಂದು ಹೇಳಿದರು.

12ನೇ ಶತಮಾನ ಸುವರ್ಣಯುಗವಾಗಿತ್ತು. ಬಸವಣ್ಣನವರ ಕಾಯಕ, ದಾಸೋಹ ತತ್ವಗಳನ್ನು ಇಂದಿಗೂ ಮಠ ಮಾನ್ಯಗಳಲ್ಲಿ ಅನುಸರಿಸುತ್ತಿದ್ದಾರೆ. ಕಲ್ಯಾಣದಲ್ಲಿನ ಅನುಭವ ಮಂಟಪವು ದೇಶ, ವಿದೇಶಗಳ ಅರಸರು, ಶರಣರನ್ನು ತನ್ನತ್ತ ಸೆಳೆದಿತ್ತು. ಇಡೀ ಮನುಕುಲ ಏಳ್ಗೆಗೆ ಶ್ರಮಿಸಿದ ಬಸವಣ್ಣನವರ ವಚನಗಳು, ತತ್ವಾದರ್ಶಗಳನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.

ಅಖಿಲ ವೀರಶೈವ ಮಹಾಸಭಾ ನಗರ ಘಟಕದ ಅಧ್ಯಕ್ಷ ಉಮೇಶ ಮುಂಡವಾಡ, ಪ್ರಾಚಾರ್ಯ ಡಾ.ಬಸವರಾಜ ಟಿ.ಎಚ್‌. ಮಾತನಾಡಿದರು.

ಸಾನಿಧ್ಯವನ್ನು ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ, ಶ್ರೀರಾಮ ದೇವರ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ ರಾಮಸ್ವಾಮಿ ವಹಿಸಿದ್ದರು.

ಪ್ರವಚನಕಾರ ಶೇಖರಯ್ಯ, ಕೋಡಿಹಳ್ಳಿ ಮುದುಕಪ್ಪ, ಬಿ.ಬಿ.ಅಸುಂಡಿ, ಬಸೆಟ್ಟಿ ಸಿದ್ದೇಶ, ರಾಜಣ್ಣ, ಸೊಪ್ಪಿನ ಮಂಜುನಾಥ ಇದ್ದರು.

ಇದಕ್ಕೂ ಮುನ್ನ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಂಗಳ ವಾದ್ಯಗಳೊಂದಿಗೆ, ಬಸವಣ್ಣನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವತಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಧರಣಿ
ಬಸವ ಹಾದಿಯಲ್ಲಿ ಸಮ ಸಮಾಜ ನಿರ್ಮಿಸೋಣ