ಹಳಿಯಾಳ: ತಾಲೂಕಿನಲ್ಲಿ ದಶಕಗಳಿಂದ ಆರಂಭಗೊಂಡ ಪರಿಸರ ಸ್ನೇಹಿ ಹೋಳಿ ಆಚರಣೆ ಜತೆಗೆ ಪ್ರತಿ ವರ್ಷದಂತೆ ಸಸಿ ನೆಡುವುದರ ಮೂಲಕ ಅದನ್ನು ಪೋಷಿಸಿ, ಬೆಳೆಸುವ ಪ್ರತಿಜ್ಞೆಯೊಂದಿಗೆ ಹೋಳಿ ಹಬ್ಬ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹಳಿಯಾಳ ಅರಣ್ಯ ವಿಭಾಗದ ಡಿಸಿಎಫ್ ಡಾ. ಪ್ರಶಾಂತಕುಮಾರ ಕೆ.ಎಸ್ ಕರೆ ನೀಡಿದರು.
ಹೋಳಿ ಹಬ್ಬವು ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದ್ದು, ವಸಂತ ಆಗಮನ ಗಿಡಮರ ಚಿಗುರೊಡೆದು ಸ್ವಾಗತಿಸುವ ಪುಣ್ಯ ಗಳಿಗೆ ಇದೆ. ಹೀಗಿರುವಾಗ ಈ ಸಮಯದಲ್ಲಿ ಗಿಡಮರಗಳ ನಾಶ ಮಾಡುವುದು ಸೂಕ್ತವು ಅಲ್ಲ, ಮೇಲಾಗಿ ಅದು ಪುಣ್ಯದ ಕಾರ್ಯವು ಆಗಲ್ಲ ಎಂದರು.
ಅರಣ್ಯ ಇಲಾಖೆಯು ನಿಮ್ಮ ಸಂಪ್ರದಾಯ ಮತ್ತು ಆಚಣೆ ಗೌರವಿಸುತ್ತಿದೆ. ಹಬ್ಬದ ಹೆಸರಿನಲ್ಲಿ ಪರಿಸರ ನಾಶ ಮಾಡುವುದರ ಮೂಲಕ ಭೂತಾಯಿಗೆ ಹಿಂಸೆ ನೀಡುವುದು ಸರಿಯಲ್ಲ. ಉತ್ತರ ಕನ್ನಡ ಜಿಲ್ಲೆಯು ಅರಣ್ಯ ಸಂಪನ್ಮೂಲಗಳಿಂದ ಕೂಡಿದ ಹಸಿರು ಜಿಲ್ಲೆಯಾಗಿದ್ದು, ಶೇ.80 ಪ್ರದೇಶವು ಅರಣ್ಯಮಯವಾಗಿದೆ. ಅರಣ್ಯ ಸಂರಕ್ಷಣೆಯಲ್ಲಿ ಜಿಲ್ಲೆಯ ಜನರ ಪಾತ್ರ ಬಹುಮಹತ್ವದ್ದಾಗಿದೆ. ನಮ್ಮ ಪೂರ್ವಜರು ಕಾಪಾಡಿಕೊಂಡು ಬಂದ ಅರಣ್ಯ ಸಂಪತ್ತನ್ನು ಮುಂದಿನ ತಲೆಮಾರಿನವರೆಗೆ ಉಡುಗೊರೆಯಾಗಿ ನೀಡುವ ಜವಾಬ್ದಾರಿಯು ನಮ್ಮೆಲ್ಲರದಾಗಿದೆ ಎಂದರು.ಪರಿಸರ ಸಂರಕ್ಷಣೆಯ ಮೂಲಕ ಹಬ್ಬ ಆಚರಿಸುವ ಹೊಸ ಸಾಂಸ್ಕೃತಿಕ ಪರ್ವ ಆಚರಿಸಲು ನಾವೆಲ್ಲರೂ ಹೆಜ್ಜೆಯಿಡೋಣ ಎಂದರು.
ಹಳಿಯಾಳ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಮಾತನಾಡಿ, ಪರಿಸರದಿಂದ ಲಾಭ ಪಡೆಯುವ ನಾವು ಪರಿಸರ ಸಂರಕ್ಷಣೆಗಾಗಿ ಕಾಳಜಿ ವಹಿಸುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪರಿಸರಕ್ಕೆ ಪೂರಕವಾಗಿ ಹಳಿಯಾಳದಲ್ಲಿ ಸಸಿ ನೆಟ್ಟು ಹೋಳಿ ಹಬ್ಬ ಆಚರಿಸುವ ಹೊಸ ಪದ್ಧತಿ ಹಲವಾರು ವರ್ಷಗಳಿಂದ ಆರಂಭಗೊಂಡಿದ್ದು,ಈ ಆಚರಣೆಯು ಹೀಗೆಯೇ ಮುಂದುವರೆಯಲಿ ಎಂದರು.ಸಮಾಜ ಸೇವಕ ಕೃಷ್ಣಪ್ಪ ಕಟ್ಟಿ, ಸತ್ಯಜಿತ ಗಿರಿ, ಬಸವರಾಜ ಬೆಂಡೀಗೇರಿಮಠ, ವಿಜಯ ಬೊಬಾಟೆ, ಗಣಪತಿ ಮಿರಾಶಿ ಹಾಗೂ ಇತರರು ಮಾತನಾಡಿ, ಪರಿಸರ ಸ್ನೇಹಿ ಹೋಳಿ ಆಚರಣೆಯ ಅವಶ್ಯಕತೆಯ ಬಗ್ಗೆ ಆಗ್ರಹಿಸಿದರು.
ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ್ ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ಸಸಿ ನೆಡುವುದರ ಮೂಲಕ ಹೋಳಿ ಆಚರಿಸುವ ಅವಶ್ಯಕತೆ ಬಗ್ಗೆ ಮಾತನಾಡಿದರು.ಹಳಿಯಾಳ ಎಸಿಎಫ್ ಮಾಜಿ ಬೀರಪ್ಪ, ಹಿರಿಯರಾದ ಕೀರಪ್ಪ ಕಂಚನಾಳಕರ, ಹಳಿಯಾಳ ಉಪವಲಯ ಅರಣ್ಯಾಧಿಕಾರಿ ಪರಶುರಾಮ ಹುದ್ದಾರ, ಅರಣ್ಯ ರಕ್ಷಕಿ ರೇಣುಕಾ ಮಡಿವಾಳ ಹಾಗೂ ವಿವಿಧ ಹೋಳಿ ಸಮಿತಿಯ ಪ್ರತಿನಿಧಿಗಳು ಇದ್ದರು.