ಪ್ಲಾಸ್ಟಿಕ್ ಮುಕ್ತಗೊಳಿಸುವ ವಿಶ್ವ ಸಂದೇಶಕ್ಕೆ ನಾವೆಲ್ಲರೂ ಕಟಿಬದ್ಧರಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ರಕ್ಷಣೆಗೆ ನಾವೆಲ್ಲ ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಪ್ರಕೃತಿಯೇ ದೇವರು, ಅದನ್ನು ಆರಾಧಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಅಭಿವೃದ್ಧಿ ಸಲುವಾಗಿ ಮರ ತೆರವುಗೊಳಿಸುವ ಬದಲಿಗೆ ಐದು ಗಿಡಗಳನ್ನು ನೆಟ್ಟು ಪ್ರಕೃತಿಗೆ ಕೊಡುಗೆಯಾಗಿ ನೀಡಬೇಕು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ಲಾಸ್ಟಿಕ್ ಮುಕ್ತಗೊಳಿಸುವ ವಿಶ್ವ ಸಂದೇಶಕ್ಕೆ ನಾವೆಲ್ಲರೂ ಕಟಿಬದ್ಧರಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ರಕ್ಷಣೆಗೆ ನಾವೆಲ್ಲ ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ತಾಲೂಕಿನ ನಲ್ಲೂರು ಗ್ರಾಮದ ಕಸ ವಿಲೇವಾರಿ ಘಟಕದಲ್ಲಿ ಆಯೋಜಿಸಿದ್ದ ಒಂದು ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪ್ರಕೃತಿಯೇ ದೇವರು, ಅದನ್ನು ಆರಾಧಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಅಭಿವೃದ್ಧಿ ಸಲುವಾಗಿ ಮರ ತೆರವುಗೊಳಿಸುವ ಬದಲಿಗೆ ಐದು ಗಿಡಗಳನ್ನು ನೆಟ್ಟು ಪ್ರಕೃತಿಗೆ ಕೊಡುಗೆಯಾಗಿ ನೀಡಬೇಕು ಎಂದರು. ಪುರಸಭೆಯು ಸ್ವಚ್ಛ ಭಾರತ್ ಯೋಜನೆಯಡಿ ೭೮ ಲಕ್ಷ ರು. ವೆಚ್ಚದಲ್ಲಿ ತ್ಯಾಜ್ಯ ವಸ್ತು ಸಂಗ್ರಹ ಶೆಡ್ ನಿರ್ಮಾಣ, ೧೫ನೇ ಹಣಕಾಸು ಯೋಜನೆಯಲ್ಲಿ ಘಟಕ್ಕೆ ೧೦ ಲಕ್ಷ ರು. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ, ೧೫ ಲಕ್ಷ ರು.ವೆಚ್ಚದಲ್ಲಿ ಕಾವಲುಗಾರನ ಶೆಡ್ ನಿರ್ಮಾಣಕ್ಕೆ ಪೂಜೆ ಮಾಡಲಾಗಿದೆ. ೨೪ ಎಕರೆ ವಿಸ್ತೀರ್ಣದ ತ್ಯಾಜ್ಯ ವಿಲೇವಾರಿ ಘಟಕ ಇಡೀ ಜಿಲ್ಲೆಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಟ್ಟಣದಿಂದ ನಿತ್ಯ ಸಂಗ್ರಹವಾಗುವ ಕಸವನ್ನ ಬೇರ್ಪಡಿಸಿ ಗೊಬ್ಬರವನ್ನಾಗಿಸಿ ರೈತರಿಗೆ ಪ್ರತಿ ಕೆಜಿಗೆ ೨ ರು. ನಂತೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ೩೫೦ ಟನ್ ಗೊಬ್ಬರ ಮಾರಾಟ ಮಾಡಲಾಗಿದೆ. ಪ್ಲಾಸ್ಟಿಕನ್ನು ಯಂತ್ರಗಳ ಸಹಾಯದಿಂದ ಪುಡಿಗೊಳಿಸಿ ಕೃಷಿಪೈಪ್ ತಯಾರಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದರು. ಅಕ್ಕಪಕ್ಕದ ರೈತರು ತಮ್ಮ ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಲು ಪುರಸಭೆ ಉತ್ಪತ್ತಿಸುವ ಗೊಬ್ಬರವನ್ನು ಖರೀದಿಸುವಂತೆ ಮನವಿ ಮಾಡಿದ ಅವರು, ಪಟ್ಟಣದ ಹೊರವಲಯದಲ್ಲಿ, ರಸ್ತೆ ಅಕ್ಕಪಕ್ಕದಲ್ಲಿ ಕಸ ಸುರಿಯುವವರ ಪತ್ತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವೇಗವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ನಗರಸಭೆಯಾಗಿ ಮೇಲ್ದರ್ಜೆಗೇರಿಸುವಂತೆ ಸಿಎಂ ಅವರನ್ನು ನೇರವಾಗಿ ಭೇಟಿ ಮಾಡಿ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪೌರಾಡಳಿತ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅವರನ್ನು ಮನವಿ ಮಾಡಿ ವಿಷಯವನ್ನು ಕ್ಯಾಬಿನೆಟ್‌ಗೆ ತರುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್ ಮಾತನಾಡಿ, ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದಲ್ಲಿ ಹೆಚ್ಚಿನ ಅನುದಾನ ಲಭ್ಯತೆಯೊಂದಿಗೆ ಜನರ ಅಗತ್ಯತೆ ಪೂರೈಸಲು ಸಾಧ್ಯ. ಅಭಿವೃದ್ಧಿಗೆ ವೇಗ ಬರಲಿದೆ. ಇದಕ್ಕಾಗಿ ಶಾಸಕರು ಶ್ರಮ ವಹಿಸುತ್ತಿದ್ದಾರೆ. ಪೌರಕಾರ್ಮಿಕರು ವ್ಯಸನಗಳಿಗೆ ದಾಸರಾಗಿ ಬಲಿಯಾಗುವುದು ಬೇಡ. ಕಳೆದೊಂದು ವರ್ಷದಲ್ಲಿ ಮೂವರು ಪೌರಕಾರ್ಮಿಕರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆರೋಗ್ಯವನ್ನು ಕಾಪಾಡಿಕೊಂಡು ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ ಎಂದರು. ಉಪಾಧ್ಯಕ್ಷೆ ರಾಣಿಕೃಷ್ಣ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಎಚ್.ಎನ್. ನವೀನ್, ಬನಶಂಕರಿ ರಘು, ರೇಖಾ ಅನಿಲ್, ರಾಧಾಮಂಜಪ್ಪ, ಸದಸ್ಯರಾದ ಧರಣೇಶ್, ಇಲಿಯಾಜ್, ಯೋಗೀಶ್, ರಾಮಕೃಷ್ಣ, ಲಕ್ಷ್ಮೀ, ಕವಿತಾರಾಜು, ಗಣೇಶ್, ನಾಮ ನಿರ್ದೇಶಿತ ಸದಸ್ಯರಾದ ರವಿ, ಪ್ರೇಮ್ ಕುಮಾರ್, ಉಮಾಶಂಕರ್, ಮುಖ್ಯಾಧಿಕಾರಿ ಆರ್, ಯತೀಶ ಕುಮಾರ್, ಪರಿಸರ ಎಂಜಿನಿಯರ್ ಕಾವ್ಯ, ಆರೋಗ್ಯ ನಿರೀಕ್ಷರಾದ ಉಮಾ, ಮಂಜುನಾಥ ಸೇರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.