ನಾಣಿಕಟ್ಟಾದಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟಿಸಿದ ಶಾಸಕ
ತಾಲೂಕಿನ ನಾಣಿಕಟ್ಟಾದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಸತ್ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ಟಿ. ನಾಯ್ಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಸತ್ ಉತ್ತಮ ವೇದಿಕೆಯಾಗಿದೆ. ಶಿಕ್ಷಣದ ಜತೆಗೆ ಸಮಾಜಮುಖಿ ಚಿಂತನೆ ಮತ್ತು ಜವಾಬ್ದಾರಿಯುತ ಪ್ರಜೆಯಾಗುವ ನಿಟ್ಟಿನಲ್ಲಿ ಯುವಜನತೆ ಮುನ್ನಡೆಯಬೇಕು ಎಂದರು.ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಅಧ್ಯಕ್ಷತೆವಹಿಸಿ ಮಾತನಾಡಿ, ಚುನಾವಣೆಯ ಮೂಲಕ ಪ್ರತಿನಿಧಿಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮತದಾನ ಪ್ರಕ್ರಿಯೆಯ ಅನುಭವ ಸಿಕ್ಕಿತು. ವಿದ್ಯಾರ್ಥಿ ಸಂಸತ್ ಅಡಿಯಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ಮತದಾರರ ಸಾಕ್ಷರತಾ ಕ್ಲಬ್‌ನ ಕಾರ್ಯಚಟುವಟಿಕೆ ನಡೆಯುತ್ತವೆ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕಿ ತನುಜಾ ನಾಯ್ಕ ಪ್ರಮಾಣವಚನ ಬೋಧಿಸಿದರು. ಪದ್ಮನಾಭ ಚೆನ್ನಯ್ಯ ಅನಿಸಿಕೆ ಹಂಚಿಕೊಂಡರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಎಂ.ಆರ್. ನಾಯ್ಕ , ಆರ್.ಎಂ. ಹೆಗಡೆ, ಲಕ್ಷ್ಮೀನಾರಾಯಣ ಹೆಗಡೆ, ಸತೀಶ ನಾಯ್ಕ, ಬಾಲಚಂದ್ರ ಹೆಗಡೆ, ಬಾಬು ಆದಿದ್ರಾವಿಡ, ಉಮೇಶ ನಾಯ್ಕ ಉಪಸ್ಥಿತರಿದ್ದರು.