ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ₹13 ಕೋಟಿ ನಿವ್ವಳ ಲಾಭ

KannadaprabhaNewsNetwork |  
Published : Jul 27, 2026, 02:45 AM IST
ಫೋಟೋವಿವರ- (26ಎಚ್‌ಪಿಟಿ3) ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್‌ನ ಮಹಾಸಭೆಯ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡಿದರು | Kannada Prabha

ಸಾರಾಂಶ

ಬ್ಯಾಂಕ್‌ನ ಒಟ್ಟಾರೆ ಸಾಲ ವಸೂಲಾತಿಯಲ್ಲಿ ಶೇ.95.14ರಷ್ಟು ಸಾಧನೆ ಮಾಡಲಾಗಿದೆ.

ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) 49 ವರ್ಷಗಳಿಂದ ನಿರಂತರ ಲಾಭದಲ್ಲಿ ಮುನ್ನಡೆಯುತ್ತ ಬಂದಿದೆ. 2025-26ನೇ ಸಾಲಿನಲ್ಲಿ ₹13.08 ಕೋಟಿ ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ.4ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.ಇಲ್ಲಿನ ಬಿಡಿಸಿಸಿ ಬ್ಯಾಂಕ್‌ನ ಮಹಾಸಭೆಯ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬ್ಯಾಂಕ್‌ನ ಒಟ್ಟಾರೆ ಸಾಲ ವಸೂಲಾತಿಯಲ್ಲಿ ಶೇ.95.14ರಷ್ಟು ಸಾಧನೆ ಮಾಡಲಾಗಿದೆ. ಬ್ಯಾಂಕ್‌ನ ಠೇವಣಿ ಮೊತ್ತ ₹1,873 .03 ಕೋಟಿ, ದುಡಿಯುವ ಬಂಡವಾಳ ₹3,011.81 ಕೋಟಿ, ಬ್ಯಾಂಕಿನ ಒಟ್ಟು ಸಾಲದ ಹೊರ ಬಾಕಿ ಮತ್ತ ₹2,062.43 ಕೋಟಿ ಇದೆ. ₹1,781.76 ಕೋಟಿ ಸಾಲ ವಿತರಿಸಲಾಗಿದೆ ಎಂದರು.

ಷೇರು ಬಂಡವಾಳ ₹133.04 ಕೋಟಿ, ಕಾಯ್ದಿಟ್ಟ ನಿಧಿಗಳು ₹183.55 ಕೋಟಿ, ಬ್ಯಾಂಕಿನ ಒಟ್ಟು ಸ್ವಂತ ಬಂಡವಾಳ ₹329.67 ಕೋಟಿ, ಪಡೆದ ಸಾಲ ಮೊತ್ತ ₹755.71 ಕೋಟಿ, ಕೃಷಿ ಸಾಲದ ವಸೂಲಾತಿಯಲ್ಲಿ ಸಾಧನೆ ಶೇ.93.33ರಷ್ಟು, ಕೃಷಿಯೇತರ ಸಾಲದ ವಸೂಲಾತಿಯಲ್ಲಿ ಸಾಧನೆ ಶೇ.98.03 ಸಾಧನೆ ಸಾಧಿಸಲಾಗಿದೆ ಎಂದರು.

ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಗಣಕೀಕರಣಗೊಳಿಸಿ ಆನ್‌ಲೈನ್‌ ಕೆಸಿಸಿ ಪೋರ್ಟಲ್‌ ಮೂಲಕ ರೈತರಿಗೆ ಕೆಸಿಸಿ ಸಾಲ ನೀಡುವುದರ ಮೂಲಕ ಯೋಜನೆ ರೂಪಿಸಲಾಗುತ್ತಿದೆ. ಇಂತಹ ಸೇವೆ ಒದಗಿಸಲಿರುವ ದೇಶದ ಪ್ರಥಮ ಸಹಕಾರ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಬಿಡಿಸಿಸಿ ಪಾತ್ರವಾಗಲಿದೆ ಎಂದರು.

ಬ್ಯಾಂಕ್ ಶಾಖೆಗಳು ಇಲ್ಲದ ಸ್ಥಳದಲ್ಲಿ ಎಟಿಎಂ ಪ್ರಾರಂಭಿಸಲು ಹಾಗೂ ಉಭಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಉಳಿತಾಯ ಖಾತೆ ತೆರೆಯುವ ಯೋಜನೆ ಇದೆ. ಈ ವರ್ಷ ಈಗಾಗಲೇ 3 ಹೊಸ ಶಾಖೆಗಳು ಉದ್ಘಾಟನೆಗೊಂಡಿದ್ದು, ಇನ್ನೂ ಆರು ಶಾಖೆಗಳು ಎರಡು ತಿಂಗಳೊಳಗೆ ಉದ್ಘಾಟನೆಗೊಳ್ಳಲಿವೆ. ಮುಂದಿನ ವರ್ಷ ಮತ್ತೆ 5 ಶಾಖೆಗಳು ಉದ್ಘಾಟನೆಗೊಳ್ಳಲಿವೆ ಎಂದರು.

ಸಾಲ ಮನ್ನಾ ಬಾಕಿ:

ರೈತರ ಸಾಲಮನ್ನಾಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಸರ್ಕಾರದ ಅವಧಿಯದ್ದು ಬಾಕಿ ಬಂದಿದೆ. ಆದರೆ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿನ ₹13 ಕೋಟಿ ಬಾಕಿ ಬರಬೇಕಿದೆ ಎಂದು ತಿಪ್ಪೇಸ್ವಾಮಿ ಹೇಳಿದರು.

ಸೈಬರ್‌ ಅಪರಾಧ:

ಸೈಬರ್‌ ಕಳ್ಳರು ಬ್ಯಾಂಕ್‌ನ ಖಾತೆಗೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್‌ ತನ್ನ ಲಾಭದಲ್ಲೇ ₹2.34 ಕೋಟಿಯನ್ನು ಸಂತ್ರಸ್ತ ಗ್ರಾಹಕರಿಗೆ ನೀಡಿದೆ. ಇಲ್ಲವಾಗಿದ್ದರೆ ಬ್ಯಾಂಕ್‌ನ ಲಾಭಾಂಶ ₹15.42 ಕೋಟಿ ಆಗಿರುತ್ತಿತ್ತು. ಆರೋಪಿಗಳಿಂದ ಹಣ ಪಡೆಯಲು ಯತ್ನಿಸಲಾಗುತ್ತಿದೆ. ಆಂತರಿಕ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥ ಸಿಬ್ಬಂದಿಯಿಂದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಐ.ದಾರುಕೇಶ್, ನಿರ್ದೇಶಕರಾದ ಎಲ್‌.ಎಸ್.ಆನಂದ, ಚಿದಾನಂದಪ್ಪ ಐಗೋಳ, ನವೀನಕುಮಾರ್ ರೆಡ್ಡಿ, ಅಕ್ಕಿ ಬಸವರಾಜ, ಕೊಟ್ರಪ್ಪ, ಪಿ.ಮೂಕಯ್ಯ ಸ್ವಾಮಿ, ಸಿಇಒ ಬಿ.ಜಯಪ್ರಕಾಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.