ಕೋರ್ಟ್ ಕಳಪೆ ಕಟ್ಟಡ ಸರಿಪಡಿಸದಿದ್ದರೆ ಕ್ರಮ: ಹೈಕೋರ್ಟ್‌ ಜಡ್ಜ್ ಎಚ್ಚರಿಕೆ

KannadaprabhaNewsNetwork |  
Published : Jul 27, 2026, 02:45 AM IST
ಹರಪನಹಳ್ಳಿ  ನಗರದ ಹೊರವಲಯದಲ್ಲಿರುವ ಗೋಸಾಯಿ ಗುಡ್ಡದ ಮೇಲೆ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಕಟ್ಟಡ ಸ್ಥಳಕ್ಕೆ ಹೈಕೋರ್ಟ್ ನ್ಯಾಯಾಧೀಶರಾದ  ಪ್ರದೀಪ್ ಸಿಂಗ್ ಯರೂರು ಭಾನುವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ನೀವು ನಿಮ್ಮ ಮನೆಯನ್ನು ಇದೇ ರೀತಿ ಕಳಪೆ ಕಟ್ಟಿಸಿಕೊಳ್ಳುತ್ತೀರಾ? ಸರ್ಕಾರದ ಹಣವನ್ನು ಬೇಕಾಬಿಟ್ಟಿ ಬಳಸಿಕೊಂಡು ನ್ಯಾಯಾಲಯದ ಕಟ್ಟಡವನ್ನು ಕಳಪೆ ಮಾಡಿರುತ್ತೀರಿ.

ಹರಪನಹಳ್ಳಿ: ನಗರದ ಹೊಸಪೇಟೆ ರಸ್ತೆ ಬಳಿ ಇರುವ ಗೋಸಾವಿ ಗುಡ್ಡದ ಮೇಲೆ ನೂತನವಾಗಿ ನಿರ್ಮಿಸಿದ ಕೋರ್ಟ್‌ ಕಟ್ಟಡವನ್ನು ಹೈಕೋರ್ಟ್ ನ್ಯಾಯಾಧೀಶ ಪ್ರದೀಪ್ ಸಿಂಗ್ ಯರೂರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸುಪರ್ದಿನಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆ ಎಂಜಿನಿಯರ್‌ಗಳ ಜತೆ ಕಟ್ಟಡ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ನೂತನ ನ್ಯಾಯಾಲಯದ ಎಲ್ಲ ಕೊಠಡಿಗಳನ್ನು ಮತ್ತು ಶೌಚಾಲಯದ ಕಟ್ಟಡಗಳನ್ನು ಹಾಗೂ ಚಾವಣಿ ಕಟ್ಟಡವನ್ನು ವೀಕ್ಷಿಸಿ ಬಳಿಕ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಲ್ಲಿಕಾರ್ಜುನ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ನೀವು ನಿಮ್ಮ ಮನೆಯನ್ನು ಇದೇ ರೀತಿ ಕಳಪೆ ಕಟ್ಟಿಸಿಕೊಳ್ಳುತ್ತೀರಾ? ಸರ್ಕಾರದ ಹಣವನ್ನು ಬೇಕಾಬಿಟ್ಟಿ ಬಳಸಿಕೊಂಡು ನ್ಯಾಯಾಲಯದ ಕಟ್ಟಡವನ್ನು ಕಳಪೆ ಮಾಡಿರುತ್ತೀರಿ. ಕೂಡಲೇ ನೂತನ ನ್ಯಾಯಾಲಯದ ಕಟ್ಟಡವನ್ನು ಸರಿಪಡಿಸಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೋಳ್ಳಲಾಗುವುದು ಎಂದು ಎಚ್ಚರಿಸಿದರು.

ಕೂಡಲೇ ನ್ಯಾಯಾಲಯದ ಕಟ್ಟಡಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪಾರ್ಕ್ ವ್ಯವಸ್ಥೆ ಮಾಡಬೇಕು. ವಕೀಲರ ಸಂಘದ ನೂತನ ಕಟ್ಟಡ ನಿರ್ಮಾಣವಾಗಬೇಕು. ನ್ಯಾಯಾಲಯದ ಸುತ್ತ ಹದ್ದುಬಸ್ತು ಮಾಡಿ ನ್ಯಾಯಾಲಯದ ಜಾಗದಲ್ಲಿ ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೋಳಿಸುವ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ನೂತನ ನ್ಯಾಯಾಲಯದ ಕಟ್ಟಡವನ್ನು ಸಂಪೂರ್ಣವಾಗಿ ಪೂರ್ಣಗೊಳಿಸದಿದ್ದರೆ ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಉಷಾರಾಣಿ ಆರ್., ಮನುಶರ್ಮ ಎಸ್.ಪಿ., ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್, ಉಪಾಧ್ಯಕ್ಷ ಬಾಗಳಿ ಮಂಜುನಾಥ್, ಕಾರ್ಯದರ್ಶಿ ಎ. ಮಲ್ಲಪ್ಪ, ಹಿರಿಯ ವಕೀಲರಾದ ಪಿ. ಜಗದೀಶ್ ಗೌಡ್ರು, ಮತ್ತಿಹಳ್ಳಿ ಅಜ್ಜಣ್ಣ, ಕೆ. ಜಗದಪ್ಪ, ವಿ.ಜಿ. ಪ್ರಕಾಶ್ ಗೌಡ್ರು, ಬಿ. ಗೋಣಿಬಸಪ್ಪ, ಡಿವೈಎಸ್ಪಿ ಸಂತೋಷ್ ಚಹ್ವಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್‌ಐ ಶಂಭುಲಿಂಗಹಿರೇಮಠ್, ನ್ಯಾಯಾಲಯದ ಸಿಬ್ಬಂಧಿಗಳು ಹಾಗೂ ವಕೀಲರ ಸಂಘದ ಹಿರಿಯ ಮತ್ತು ಕಿರಿಯ ನ್ಯಾಯಾವಾಧಿಗಳು ಹಾಜರಿದ್ದರು.

ಹರಪನಹಳ್ಳಿ ತಾಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳು ಇರುವುದರಿಂದ ಹೆಚ್ಚುವರಿಯಾಗಿ ಈಗಾಗಲೇ ಅನುಮೋದನೆಯಾಗಿರುವ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಹರಪನಹಳ್ಳಿಗೆ ನೀಡಬೇಕು ಎನ್ನುತ್ತಾರೆ ವಕೀಲರ ಸಂಘದ ಪದಾಧಿಕಾರಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.