ಅಕ್ಷರ, ಸಂಸ್ಕೃತಿ, ಅಭಿವೃದ್ಧಿ ಚಿಂತನೆಗೆ ಸಮ್ಮೇಳನ ಸಾಕ್ಷಿ

KannadaprabhaNewsNetwork |  
Published : Jul 27, 2026, 02:45 AM IST
ಸಸಸಸ | Kannada Prabha

ಸಾರಾಂಶ

ಸಮ್ಮೇಳನದ ಎರಡು ದಿನಗಳಲ್ಲಿ ಸಾವಿರಾರು ಕನ್ನಡಾಭಿಮಾನಿಗಳು, ಸಾಹಿತಿಗಳು, ಕವಿಗಳು, ಸಂಶೋಧಕರು, ಕಲಾವಿದರು ಮತ್ತು ಸಾರ್ವಜನಿಕರು ಹಿರೇಮನ್ನಾಪುರದಲ್ಲಿ ಸೇರಿದ್ದರು

ಪರಶಿವಮೂರ್ತಿ ಮಾಟಲದಿನ್ನಿ ಹಿರೇಮನ್ನಾಪುರ

ಕಲಾವಿದರ ತವರೂರಾದ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳ ಮೇಲೆ ಸಾಹಿತ್ಯದ ಚರ್ಚೆ, ಕವಿತೆಗಳ ಗಾಯನ, ಸಂಸ್ಕೃತಿಯ ಅನಾವರಣ... ಹೀಗೆ ಎರಡು ದಿನಗಳ ಕಾಲ ಹಿರೇಮನ್ನಾಪುರ ನಿಜಕ್ಕೂ ಅಕ್ಷರ ಜಾತ್ರೆಯಾಗಿ ಕಂಗೊಳಿಸಿತು.

ಈ ಸಮ್ಮೇಳನ ಕೇವಲ ಔಪಚಾರಿಕ ಕಾರ್ಯಕ್ರಮವಾಗಿರಲಿಲ್ಲ, ಕನ್ನಡ ಭಾಷೆಯ ಭವಿಷ್ಯ, ಸಮಾಜದ ಬದಲಾಗುತ್ತಿರುವ ಮೌಲ್ಯ, ನೆಲಮೂಲ ಸಂಸ್ಕೃತಿ, ರೈತರ ಬದುಕು, ಪರಿಸರ, ಶಿಕ್ಷಣ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ನಡೆದ ಮುಕ್ತ ಸಂವಾದದ ವೇದಿಕೆಯಾಯಿತು.

ಸಮ್ಮೇಳನದ ಎರಡು ದಿನಗಳಲ್ಲಿ ಸಾವಿರಾರು ಕನ್ನಡಾಭಿಮಾನಿಗಳು, ಸಾಹಿತಿಗಳು, ಕವಿಗಳು, ಸಂಶೋಧಕರು, ಕಲಾವಿದರು ಮತ್ತು ಸಾರ್ವಜನಿಕರು ಹಿರೇಮನ್ನಾಪುರದಲ್ಲಿ ಸೇರಿದ್ದರು. ಗ್ರಾಮೀಣ ವಾತಾವರಣದಲ್ಲೇ ನಡೆದ ಸಾಹಿತ್ಯ ಸಮ್ಮೇಳನವು ನಗರದ ಸಭಾಂಗಣಗಳಿಗಿಂತ ವಿಭಿನ್ನ ಅನುಭವ ನೀಡಿತು. ಗ್ರಾಮಸ್ಥರ ಆತಿಥ್ಯ, ಸ್ವಯಂಸೇವಕರ ಸೇವೆ ಮತ್ತು ಸಂಘಟಕರ ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಗೋಷ್ಠಿಗಳಲ್ಲಿ ಗಂಭೀರ ಚಿಂತನೆ: ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ, ನೆಲಮೂಲ ಸಂಸ್ಕೃತಿಯ ಮಹತ್ವ, 371(ಜೆ) ಮೀಸಲಾತಿ ಸಂರಕ್ಷಣೆ, ಕೋಮು ಸೌಹಾರ್ದ, ಕನ್ನಡ ಭಾಷೆಯ ಬೆಳವಣಿಗೆ, ಓದುವ ಸಂಸ್ಕೃತಿ, ರಂಗಭೂಮಿಯ ಭವಿಷ್ಯ, ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆದವು.

ಭಾರತೀಯ ಸಂಸ್ಕೃತಿಯು ವೈವಿಧ್ಯತೆಯಲ್ಲಿ ಏಕತೆ ಪ್ರತಿಪಾದಿಸುತ್ತದೆ ಎಂಬ ಸಂದೇಶದಿಂದ ಹಿಡಿದು ಸಂಸ್ಕೃತಿಯನ್ನು ಸಮಾಜ ಒಗ್ಗೂಡಿಸುವ ಸಾಧನವನ್ನಾಗಿಸಬೇಕು ಎಂಬ ಅಭಿಪ್ರಾಯದ ವರೆಗೆ ಅನೇಕ ಚಿಂತನೆಗಳು ವೇದಿಕೆಯಲ್ಲಿ ವ್ಯಕ್ತವಾದವು.

ಕವಿಗೋಷ್ಠಿಯು ಸಾಹಿತ್ಯಾಸಕ್ತರ ಮನಗೆದ್ದಿತು. ಹಿರಿಯ ಹಾಗೂ ಯುವ ಕವಿಗಳು ಪರಿಸರ, ರೈತರ ಬದುಕು, ಕುಟುಂಬ, ಮಹಿಳಾ ಸಂವೇದನೆ, ಪ್ರೀತಿ, ವಿಜ್ಞಾನ, ಸಾಮಾಜಿಕ ಅಸಮಾನತೆ, ಉದ್ಯೋಗ, ಅಭಿವೃದ್ಧಿ ಸೇರಿದಂತೆ ಸಮಕಾಲೀನ ವಿಷಯಗಳ ಕುರಿತು ಕವನ ವಾಚಿಸಿದರು.

ಸಮ್ಮೇಳನದ ವಿಶೇಷತೆ ಎಂದರೆ ಸಾಹಿತ್ಯದ ಜತೆಗೆ ಜಿಲ್ಲೆಯ ಅಭಿವೃದ್ಧಿಯ ಕುರಿತು ಧ್ವನಿ ಎತ್ತಿರುವುದು. ಬಹಿರಂಗ ಅಧಿವೇಶನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಒತ್ತಾಯಿಸುವ ನಿರ್ಣಯಗಳು ಸರ್ವಾನುಮತದಿಂದ ಅಂಗೀಕಾರಗೊಂಡವು.

ರಂಗು ತುಂಬಿದ ಸಾಂಸ್ಕೃತಿಕ ಕಾರ್ಯಕ್ರಮ: ಸಮ್ಮೇಳನದ ಸಂಜೆಗಳು ಜನಪದ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಂಗೇರಿದವು. ಕಲಾವಿದರು ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳಿಸಿದರೆ ಪ್ರೇಕ್ಷಕರು ಕಾರ್ಯಕ್ರಮಗಳಿಗೆ ಭರ್ಜರಿ ಸ್ಪಂದನೆ ನೀಡಿದರು. ಸಾಹಿತ್ಯ ಮತ್ತು ಕಲೆಯ ಸಂಗಮವು ಸಮ್ಮೇಳನಕ್ಕೆ ಮತ್ತಷ್ಟು ಮೆರುಗು ತಂದಿತು.

ಸಾವಿರಾರು ಜನರಿಗೆ ಊಟೋಪಚಾರ, ವಾಹನ ನಿಲುಗಡೆ, ವೇದಿಕೆ ವ್ಯವಸ್ಥೆ, ವಸತಿ, ಸ್ವಚ್ಛತೆ, ಸಂಚಾರ ನಿಯಂತ್ರಣ ಸೇರಿದಂತೆ ಪ್ರತಿಯೊಂದು ವ್ಯವಸ್ಥೆ ಗ್ರಾಮಸ್ಥರು ಮತ್ತು ಸಂಘಟಕರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಹಿರೇಮನ್ನಾಪುರ ಗ್ರಾಮಸ್ಥರು ತಮ್ಮ ಮನೆಯ ಕಾರ್ಯಕ್ರಮದಂತೆ ಎರಡು ದಿನಗಳ ಕಾಲ ನಡೆಸಿಕೊಟ್ಟಿದ್ದಾರೆ. ಗ್ರಾಮದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.