ಹನುಮಸಾಗರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯ ಯಾವುದೇ ಅರ್ಹ ಫಲಾನುಭವಿಯಿಂದ ವಂಚಿತವಾಗದಂತೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಪ್ರತಿಯೊಬ್ಬ ಅರ್ಹರಿಗೂ ಯೋಜನೆಗಳ ಪ್ರಯೋಜನ ತಲುಪಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಫಾರುಖ್ ಡಾಲಾಯತ್ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ಸಮಾಜದ ಬಡವರು, ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರ ಬದುಕಿಗೆ ನೆರವಾಗುವ ಉದ್ದೇಶ ಹೊಂದಿವೆ. ಆದ್ದರಿಂದ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಂದ ಬರುವ ಅರ್ಜಿ ಹಾಗೂ ದೂರು ತ್ವರಿತವಾಗಿ ಪರಿಶೀಲಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಹನುಮಸಾಗರ ವ್ಯಾಪ್ತಿಯಲ್ಲಿ ಒಟ್ಟು 2,826 ಪಡಿತರ ಚೀಟಿ ಇದ್ದು, ಅವುಗಳಲ್ಲಿ 2,769 ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ನೇರವಾಗಿ ಜಮೆಯಾಗುತ್ತಿದೆ ಎಂದು ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಸರ್ಕಾರದ ನಿಯಮಾನುಸಾರ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, ಯೋಜನೆಯ ಅನುಷ್ಠಾನ ಸುಗಮವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಆಹಾರ ಇಲಾಖೆ ಅಧಿಕಾರಿ ಮಂಜುಳಾ ಪರಸಾಪುರ, ಜೆಸ್ಕಾಂ ಶಾಖಾಧಿಕಾರಿ ಮೌಲಸಾಬ್, ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ ಹಕ್ಕಿ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಅಮರೇಶ ಗಾಂಜಿ, ನರಸಪ್ಪ, ಬಾಳಪ್ಪ ಅರಳಿಕಟ್ಟಿ, ಮಂಜುನಾಥ, ಹುಸೇನ್, ಶೋಭಾ, ಮಂಜುಳಾ, ಶಕುಂತಲಾ, ಅನ್ನಪೂರ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.